ಕೆ.ಆರ್.ಪೇಟೆ, ಮಾ.7- ಎರಡು ದೇವಾಲಯಗಳ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಲಕ್ಷಾಂತರ ರೂ ಮೌಲ್ಯದ ದೇವರ ವಿವಿಧ ಬಗೆಯ ಆಭರಣಗಳನ್ನು ಹಾಗೂ ಹರಕೆಯ ಹುಂಡಿಯನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮತ್ತು ಈಶ್ವರ ದೇವಾಲಯಗಳ ಬಾಗಿಲು ಮುರಿದಿರುವ ದುಷ್ಕರ್ಮಿಗಳು ಶ್ರೀ ಲಕ್ಷ್ಮೀದೇವಿ ದೇವಾಲಯದಲ್ಲಿದ್ದ ಸುಮಾರು 500ಗ್ರಾಂ ತೂಕದ ದೇವರ ವಿವಿಧ ಬಗೆಯ ಆಭರಣಗಳು, ಸುಮಾರು 1ಕೆ.ಜಿ.ತೂಕದ ಬೆಳ್ಳಿಯ ಕತ್ತಿಗಳು, ಪಾದುಕೆಗಳು, ಕಿರೀಟಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇಲ್ಲಿಂದ ಅನತಿ ದೂರದ ಈಶ್ವರ ದೇವಾಲಯಕ್ಕೂ ಕನ್ನ ಹಾಕಿರುವ ಕಳ್ಳರು ಅಲ್ಲಿ ಆಭರಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಏನೂ ಸಿಗದಿದ್ದಾಗ ದೇವರ ಹುಂಡಿಯನ್ನು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಕಿಕ್ಕೇರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಮಂಡ್ಯದಿಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಸ್ಥಳಕ್ಕೆ ಎ.ಎಸ್.ಐ.ಚೌಡೇಗೌಡ, ಕುಮಾರ್ ಮತ್ತಿತರರು ಭೇಟಿ ನೀಡಿ ಮಹಜರು ನಡೆಸಿ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.