ಬೆಂಗಳೂರು: ಸಾರಿಗೆ ಕಂಡಕ್ಟರ್ ಒಬ್ಬರು ನನ್ನನ್ನು ಒಂದು ಗಂಟೆಗೂ ಹೆಚ್ಚು ಕಾಲ ಬಿಎಂಟಿಸಿ ಬಸ್ನಲ್ಲಿ ಕೂಡಿ ಹಾಕಿ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿಯೊಬ್ಬಳು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನಿನ್ನೆ ರಾತ್ರಿ ಯಲಹಂಕಕ್ಕೆ ಹೋಗುತ್ತಿದ್ದ 402 ನೇ ನಂಬರ್ನ ಬಸ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ವಾರ ಈಶಾನ್ಯ ಭಾರತೀಯ ವಿದ್ಯಾರ್ಥಿಗಳೊಂದಿಗೆ ಯುವತಿಯ ಗೆಳೆಯ ಜಗಳ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಇದಕ್ಕೆ ಪ್ರತೀಕಾರವಾಗಿ ಕಂಡಕ್ಟರ್ ಮತ್ತು ಬಸ್ ಡ್ರೈವರ್ ಯುವತಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಯುವತಿಯನ್ನು ಬಸ್ನಲ್ಲೇ ಲಾಕ್ ಮಾಡಿದ ಡ್ರೈವರ್ ಹಾಗೂ ಕಂಡಕ್ಟರ್ ಸ್ನೇಹಿತನನ್ನು ಕರೆಸುವಂತೆ ಪಟ್ಟು ಹಿಡಿದಿದ್ದಾರೆ. ಬಸ್ನಿಂದ ಕೆಳಗೆ ಇಳಿಯಲು ಅವಕಾಶ ನೀಡದೇ ಲಾಕ್ ಮಾಡಿ ಕಂಡಕ್ಟರ್ ಕೂಡಿ ಹಾಕಿದ್ದಾನೆ. ಬಸ್ನಲ್ಲಿ ಕಿರುಚಾಡಿ, ಗೋಳು ತೋಡಿಕೊಂಡರೂ ಪೊಲೀಸರು ಸಹಾಯಕ್ಕೆ ಬಂದಿಲ್ಲ. ನನ್ನ ಗೆಳೆಯ ಜಗಳ ಮಾಡಿದ್ದಕ್ಕೂ ನನಗೂ ಸಂಬಂಧ ಇಲ್ಲವೆಂದು ಹೇಳಿದರೂ ಪೊಲೀಸರು ಕೇಳಿಲ್ಲ. ನಾನು ಮನೆಗೆ ಹೋಗುತ್ತೇನೆ ಎಂದರು ಪೊಲೀಸರು ಬಿಟ್ಟಿಲ್ಲ. ಠಾಣೆಗೆ ಬಂದು ಹೇಳಿಕೆ ಕೊಡುವಂತೆ ಬಲವಂತ ಮಾಡಿದ್ದರು ಎಂದು ಆರೋಪಿಸಿದ್ದಾಳೆ.
ಇಷ್ಟೇ ಅಲ್ಲದೇ ಈ ವೇಳೆ ಅಲ್ಲಿ ಮಹಿಳಾ ಪೇದೆ ಇರಲಿಲ್ಲ. ಈ ಕಾರಣದಿಂದಾಗಿ ನಾನು ಠಾಣೆಗೆ ಹೋಗಲು ನಿರಾಕರಿಸಿದೆ. ನನ್ನದೇನೂ ತಪ್ಪಿಲ್ಲದಿದ್ದರೂ ಠಾಣೆಗೆ ಬರುವಂತೆ ಪೊಲೀಸರು ಬೆದರಿಸಿದ್ದರು. ಇದರಿಂದ ನೊಂದು ನಾನು ನನ್ನ ಮತ್ತೊಬ್ಬ ಸ್ನೇಹಿತನಿಗೆ ಫೋನ್ ಮಾಡಿದೆ. ಆತ ಬಂದು ನನ್ನನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ದ. ಈ ವೇಳೆ ನಾವು ಕಂಡಕ್ಟರ್ ಮತ್ತು ಡ್ರೈವರ್ ವಿರುದ್ಧ ದೂರು ನೀಡಿದರೆ ಪೊಲೀಸರು ಸ್ವೀಕರಿಸಲು ನಿರಾಕರಿಸಿದರು ಎಂದು ಯುವತಿ ದೂರಿದ್ದಾಳೆ.
ಇನ್ನು ವಿಷಯ ತಿಳಿದ ಇನ್ಸ್ಪೆಕ್ಟರ್ ನಾಗರಾಜ ರಾಜಿ ಸಂಧಾನ ನಡೆಸಲು ಯತ್ನಿಸಿದ್ದರು ಎಂದು ಯುವತಿ ಸಾಮಾಜಿಕ ತಾಣಗಳಲ್ಲಿ ವಿವರವಾಗಿ ಬರೆದಿದ್ದಾಳೆ.