ಸುಕೃತಾ ವಾಗೆÛ ಸಿನಿಮಾ ಕ್ಷೇತ್ರಕ್ಕೆ ಬಂದು ಹೆಚ್ಚು ಸಮಯವಾಗಲಿಲ್ಲ. ಆಗಲೇ ಅಭಿನಯ ಪ್ರಧಾನ ಪಾತ್ರಗಳಿಂದ ಗುರುತಿಸಿಕೊಂಡಿರೋ ನಟಿ. “ಜಟ್ಟ’ , “ಫ್ಲಾಪ್’, ಮೊದಲಾದ ಚಿತ್ರಗಳ ಬಳಿಕ ಈಗ ಸುಮನಾ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’ ಸಿನಿಮಾದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸುಕೃತಾ ಹುಟ್ಟೂರು ಉಡುಪಿ. ಓದಿದ್ದು ಚಿತ್ರದುರ್ಗದಲ್ಲಿ. ಗೋವಾ ಮೂಲದ ಕೊಂಕಣಿ ಸಮುದಾಯಕ್ಕೆ ಸೇರಿದ ಹುಡುಗಿ. ಅಪ್ಪ ಸದಾನಂದ ವಾಗೆÛ, ಅಮ್ಮ ಸ್ಮಿತಾ ವಾಗೆÛ, ತಂಗಿ ಸಾಫಲ್ಯ. ಸುಕೃತಾಗೆ ಫೈಟರ್ ಜೆಟ್‌ನಲ್ಲಿ ಪೈಲೆಟ್ ಆಗ್ಬೇಕಂತ ಆಸೆ ಇದ್ದಿದ್ದು. ಅನಿವಾರ್ಯವಾಗಿ ಗಗನಸಖೀಯಾದವರು.
*
ಗಗನ ಸಖೀಯಾಗಿದ್ದಾಗ ..
ನನಗೆ ಮೊದಲಿನಿಂದಲೂ ಟ್ರಾವೆಲಿಂಗ್ ಅಂದ್ರೆ ಬಹಳ ಇಷ್ಟ. ಇನ್ನೊಂದು ಕನಸು ಫೈಟರ್ ಜೆಟ್‌ನಲ್ಲಿ ಪೈಲೆಟ್ ಆಗ್ಬೇಕು ಅಂತ. ಆದ್ರೆ ಭಾರತೀಯ ವಾಯುಪಡೆಯಲ್ಲಿ ಫೈಟರ್ ಜೆಟ್‌ಗೆ ಹೆಣ್ಮಕ್ಕಳನ್ನು ತಗೊಳ್ತಿರಲಿಲ್ಲ. ಉಳಿದ ಕೋರ್ಸ್‌ಗಳು ಬಹಳ ದುಬಾರಿ. ಅದನ್ನು ಭರಿಸೋದು ಕಷ್ಟವಿತ್ತು. ಆಗ ಏರ್‌ಹೋಸ್ಟೆಸ್ ಟ್ರೈನಿಂಗ್‌ಗೆ ಕಾಲ್‌ಫಾರ್ ಮಾಡಿದ್ರು. ಪೈಲೆಟ್ ಆಗಿ ಅಲ್ಲದಿದ್ದರೆ ಏರ್‌ಹೋಸ್ಟೆಸ್. ವಿಮಾನದಲ್ಲಿ ವಿಶ್ವವೆಲ್ಲ ಸುತ್ತಬಹುದಲ್ವಾ ಅಂತ.
ಸೆಕೆಂಡ್ ಲೆಕ್ಕದಲ್ಲಿ ಕೆಲಸ
ಏರ್‌ಹೋಸ್ಟೆಸ್‌ನಂಥ ಚಾಲೆಜಿಂಗ್ ಜಾಬ್ ಇನ್ನೊಂದಿಲ್ಲ. ಇಲ್ಲಿ ಸೆಕೆಂಡ್ ಲೆಕ್ಕದಲ್ಲಿ ನೀವು ಕೆಲಸ ಮುಗಿಸಬೇಕಾಗತ್ತೆ. ಆರಂಭದಲ್ಲಿ ವಿಶ್ ಮಾಡಿ, ಕೊನೆಯಲ್ಲಿ ಬಾಯ್ ಮಾಡೋ, ತಿಂಡಿ ತೀರ್ಥ ಸಪ್ಲೆ„ ಮಾಡೋದಷ್ಟೇ ಸಾಮಾನ್ಯ ಪ್ರಯಾಣಿಕರ ಕಣ್ಣಿಗೆ ಬೀಳತ್ತೆ. ಆದ್ರೆ ನಮ್ಮ ಕೆಲಸ ಅಷ್ಟಕ್ಕೇ ಸೀಮಿತವಲ್ಲ. ವಿಮಾನದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಕುಕ್ಕಿಂಗ್‌ನ ನಾವೇ ನಿರ್ವಹಿಸಬೇಕು. ನರ್ಸ್, ಡಾಕ್ಟರ್ ಎಲ್ಲ ನಾವೇ ಆಗ್ಬೇಕು. ಪೈಲೆಟ್‌ಗೆ ಕರೆಕ್ಟ್ ಟೈಂಗೆ ಫುಡ್ ಸರ್ವ್ ಮಾಡ್ಬೇಕು. ಕೊನೆಯಲ್ಲಿ ಲ್ಯಾವೆಟ್ರೀಸ್ ಅರ್ಥಾತ್ ಬಾತ್‌ರೂಂ ಕ್ಲೀನ್ ಮಾಡುವುದೂ ನಮ್ಮದೇ ಜವಾಬ್ದಾರಿ. ಇಷ್ಟೆಲ್ಲ ಮಾಡಿಯೂ ನಮ್ಮ ಡ್ರೆಸ್‌ನಲ್ಲಿ ಸಣ್ಣದೊಂದು ನೀರಹನಿಯೂ ಸಿಡಿದಿರಬಾರದು, ಕೂದಲು ಒಂದಿಂಚು ಅತ್ತಿತ್ತ ಸರಿದಿರಬಾರದು. ಉಗುರು ಸಹ ಒಂಚೂರೂ ಬೆಳೆದಿರಬಾರದು. ಎಂಥ ಸನ್ನಿವೇಶದಲ್ಲೂ ನಗು ಮುಖದಿಂದ ಮರೆಯಾಗಬಾರದು.
ಹೈಟ್ ವೈಟ್ ಕಥೆ
ಈ ಉದ್ಯೋಗದಲ್ಲಿ ನಿಮ್ಮ ಹೈಟ್ ಎಷ್ಟಿದೆಯೋ ಅಷ್ಟೇ ವೈಟ್ ಇರ್ಬೇಕು, ಒಂಚೂರು ಆಚೀಚೆ ಆದರೂ ಒಂದು ವಾರ ಟೈಂ ಕೊಡ್ತಾರೆ, ಅಷ್ಟರ ಒಳಗೆ ತೂಕ ಹೆಚ್ಚಿಸಿಕೊಳ್ಳೋದೋ ಇಳಿಸಿಕೊಳ್ಳೋದೋ ಮಾಡ್ಬೇಕು. ಇದಕ್ಕೆ ತಕ್ಕ ಫುಡ್, ಡಯೆಟ್ ಕಂಪಲ್ಸರಿ. ಫ್ಲೈಟ್ ಏರುವ ಮುನ್ನ ನಮ್ಮ ಡೀಟೈಲ್ಡ್ ಚೆಕ್ಕಿಂಗ್ ಆಗತ್ತೆ. ನಮ್ಮ ಆರೋಗ್ಯ ಹೇಗಿದೆ ಅನ್ನೋದ್ರಿಂದ ಹಿಡಿದು ನಾವು ಆಲ್ಕೋಹಾಲ್ ಸೇವನೆ ಮಾಡಿದ್ದೀವಾ, ಸ್ಮೋಕ್ ಮಾಡಿದ್ದೀವಾ ಅನ್ನೋದನ್ನೆಲ್ಲ ಚೆಕ್ ಮಾಡ್ತಾರೆ. ವೆಟ್ ಚೆಕ್ಕಿಂಗೂ ಇರತ್ತೆ.
ಏರ್‌ಹೋಸ್ಟೆಸ್ ಕೆಲಸದ ನಡುವೆ ಬಿಡುವಾದಾಗ ಮಾಡೆಲಿಂಗ್ ಮಾಡ್ತಿದ್ದೆ. ಅಲ್ಲಿಂದ ಚಿತ್ರರಂಗದ ನಂಟು ಬೆಳೆಯಿತು.
ಸಿನಿಮಾ ಜಗತ್ತು
ಸಿನಿಮಾ ಜಗತ್ತು ಬಹಳ ಸಾರಿ ನನ್ನನ್ನು ಬೆರಗುಗೊಳಿಸಿದೆ. ಕೊನೆಯವರೆಗೂ ಇಲ್ಲೇ ಇರಿ¤àನಿ ಅನ್ನಕ್ಕಾಗಲ್ಲ. ಇರುವಷ್ಟು ದಿನ ಅದ್ಭುತ ಪಾತ್ರ ಮಾಡ್ತಾ ಹೋಗ್ಬೇಕು ಅಂತ ಆಸೆ. ಏರ್‌ಹೋಸ್ಟೆಸ್ ಕೆಲಸಕ್ಕೆ ಹೋಲಿಸಿದರೆ ಸಿನಿಮಾ ಎಷ್ಟೋಪಟ್ಟು ಆರಾಮದ ಕೆಲಸ ಅನ್ನೋದಂತೂ ಸತ್ಯ.
**
ಮನೇಲಿದ್ರೆ ನಾರ್ಮಲ್ ಹುಡುಗಿ
ವರ್ಕೋಹಾಲಿಕ್ ಸ್ವಭಾವ ಒಂದು ಬಿಟ್ಟರೆ ನಾನು ನಿಮ್ಮ ಹಾಗೆ ನಾರ್ಮಲ್ ಹುಡುಗಿ. ಸ್ಕೂಲ್, ಕಾಲೇಜ್‌ಗಳಲ್ಲಿ ಅಂಥ ಜಾಣೆ ಏನಲ್ಲ. ಹಾಗಂತ ದಡ್ಡಿಯೂ ಅಲ್ಲ. ಸಾಧಾರಣ ಹುಡುಗಿ. ಮನೆಯಲ್ಲಿದ್ದಾಗ ಅಡುಗೆ ಮಾಡೋದು ನನ್ನಿಷ್ಟದ ಹವ್ಯಾಸ. ಪಕ್ಕಾ ಹೌಸ್‌ವೈಫ್ ಥರಾನೇ ಇರಿ¤àನಿ. ಶುರುಶುರುವಲ್ಲಿ ನಾರ್ಮಲ್ ಅಡುಗೆ ಮಾಡ್ತಿದ್ದೆ. ಇತ್ತೀಚೆಗೆ ಎಕ್ಸ್‌ಪರಿಮೆಂಟ್ ಮಾಡೋದು ಕಲ್ತಿದ್ದೀನಿ.
ಫ್ಯೂಜನ್ ಕುಕ್ಕಿಂಗ್ ಗೊತ್ತಾ?
ನೀವಿದನ್ನ ಸ್ಟಾರ್ ಹೊಟೇಲ್‌ಗಳಲ್ಲಿ ಕೇಳಿರಬಹುದು. ತಿಂದಿರಬಹುದು. ಆದ್ರೆ ಅದು ಅಂಥ ಕಷ್ಟ ಏನಲ್ಲ. ಬೇರೆ ಬೇರೆ ಅಡುಗೆ ವೆರೈಟಿಗಳನ್ನ ಒಂದೇ ತಿಂಡಿ ಮೇಲೆ ಪ್ರಯೋಗ ಮಾಡೋದು. ಉದಾಹರಣೆಗೆ ನೀವು ಇಡ್ಲಿ ಮಾಡ್ತೀರ ಅಂತಿಟ್ಕೊಳ್ಳಿ. ಅದಕ್ಕೆ ಜತೆಯಾಗಿ ಚಟ್ನಿ ಮಾಡ್ತೀರ. ಆದರೆ ಫ್ಯೂಜನ್ ಮಾಡೋದಾದ್ರೆ ಚಟ್ನಿ ಬದಲಿಗೆ ಚೈನೀಸ್ ಐಟಂ ಏನಾದ್ರೂ ಮಾಡºಹುದು. ಕಳೆದ ಒಂದು ವರ್ಷದಿಂದ ಬೇಕಿಂಗ್ ಕಲೀತಿದ್ದೀನಿ.
ನಾನು ಫಿಶಿಟೇರಿಯನ್
ಹೌದು , ಫಿಶ್‌ನ್ನ ತಿಂತೀನಿ. ಅದು ನಂಗಿಷ್ಟ. ನನ್ನ ದೇಹಪ್ರಕೃತಿಗೆ ಆರೋಗ್ಯಕ್ಕೆ ಸರಿಹೊಂದುವ ಫುಡ್ ಅದು. ನಾವು ಗೋವಾ ಮೂಲದಿಂದ ಬಂದ ಕೊಂಕಣ ಸೀಮೆಯ ಮಂದಿ. ಹಾಗಾಗಿ ಮೀನು ಹಿಂದಿನಿಂದಲೂ ನಮ್ಮ ಆಹಾರಗಳಲ್ಲಿ ಸ್ಥಾನ ಪಡೆದಿದೆ. ಅದು ಬಿಟ್ರೆ ಬೇರೆ ನಾನ್‌ವೆಜ್ ತಿನ್ನಲ್ಲ. ಮಾಮೂಲಿ ಎಲ್ಲ ರೀತಿಯ ಅಡುಗೆಗಳನ್ನೂ ಟೇಸ್ಟ್ ಮಾಡ್ತೀನಿ. ನಾನು ಮಾಡೋ ಅಡುಗೆಯನ್ನು ಮನೆಯಲ್ಲಿ ಎಲ್ಲರೂ ಇಷ್ಟಪಡ್ತಾರೆ. ಸ್ವತಃ ನನಗೂ ಇಷ್ಟ. ಆಗಾಗ ನೀರು ಕುಡಿಯುತ್ತಾ ಇರೋದು ಬಹಳ ಹಿಂದಿನಿಂದ ಬಂದ ಅಭ್ಯಾಸ.
ಅಮ್ಮಂದಿರ ನೆವದಲ್ಲಿ ..
ಈ ಅಮ್ಮಂದಿರನ್ನು ನೋಡಿ ಎಷ್ಟೋ ಸಲ ಆಶ್ಚರ್ಯ ಪಟ್ಟಿದ್ದೀನಿ. ಅವರು ಯಾವತ್ತೂ ಅವರ ಸ್ವಂತಕ್ಕೆ ಯೋಚನೆಯೇ ಮಾಡಲ್ಲ. ಸಂಜೆ ಆದರೆ ನಾಳೆ ಬೆಳಗ್ಗೆ ತಿಂಡಿಗೇನು ಮಾಡೋದು ಅಂತ ಯೋಚಿಸ್ತಿರ್ತಾರೆ. ಅದು ಮಾಡಿದ್ರೆ ಗಂಡನಿಗಾಗಲ್ಲ. ಇದು ಮಗಳಿಗಿಷ್ಟ ಇಲ್ಲ. ಇನ್ನೊಂದನ್ನ ನಿನ್ನೆ ತಾನೇ ಮಾಡಾಗಿದೆ. ನಾಳೆ ಏನು ಮಾಡೋದು ಅಂತ ಯೋಚನೆ. ಬೆಳಗ್ಗೆ ಎಲ್ಲರಿಗಿಂತ ಬೇಗ ಏಳ್ತಾರೆ. ಒಂದು ಕ್ಷಣವೂ ಬಿಡುವಿಲ್ಲದೇ ದುಡಿಯುತ್ತಾರೆ. ಇಡೀ ದಿನದಲ್ಲಿ ಅವರು ಅವರಿಗೋಸ್ಕರ ಅಂತ ಒಂದು ಕ್ಷಣವನ್ನೂ ಕಳೆಯುವುದಿಲ್ಲ.
ನನ್ನನ್ನು ಈ ಸ್ಥಾನದಲ್ಲಿ ಕಲ್ಪಿಸಿಕೊಲೊÛàದೇ ಕಷ್ಟ ಆಗತ್ತೆ. ಒಂದು ವೇಳೆ ನಾನು ಮದುವೆಯಾದ್ರೆ ಖಂಡಿತಾ ಬೆಸ್ಟ್ ಹೌಸ್‌ವೈಫ್ ಆಗ್ತಿàನಿ, ಆದ್ರೆ 99 ಪರ್ಸೆಂಟ್ ನಾನು ಮದ್ವೆ ಆಗಲ್ಲ. ಯಾಕಂದ್ರೆ ನನಗೆ ಸಾಕಷ್ಟು ಕನಸುಗಳಿವೆ. ಟ್ರಾವೆಲಿಂಗ್ ನನ್ನ ಮೆಚ್ಚಿನ ಹವ್ಯಾಸ. ಅಪ್ಪ ಈ ವರ್ಷ ನಿವೃತ್ತರಾಗಿ ಸಂಪೂರ್ಣ ಕೃಷಿಕರಾಗಿದ್ದಾರೆ. ಕೃಷಿ ನನ್ನ ಆದ್ಯತೆಯೂ ಹೌದು. ನನಗೆ ಫಾರ್ಮ್ ಮಾಡೋ ಆಸೆ ಇದೆ. ಈ ಜಗತ್ತು ಚಿತ್ರ ವಿಚಿತ್ರ ಜನ, ಆ ಪರಿಸರ, ಹವಾಮಾನ ಎಲ್ಲವನ್ನೂ ಕಣ್ಣಾರೆ ಕಾಣಬೇಕು.
-ಉದಯವಾಣಿ