
ಚಂಡೀಗಢ್: ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿಗೆ ಬೇಡಿಕೆಯೊಡ್ಡಿ ಹರ್ಯಾಣದಲ್ಲಿ ಜಾಟ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರವಾಗಿದ್ದು, ಹಿಂಸಾಕೃತ್ಯದಲ್ಲಿ ಇದುವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. 78 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಪ್ರತಿಭಟನೆ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ.
ಪರಿಸ್ಥಿತಿಯನ್ನು ಶಾಂತಗೊಳಿಸಲು ಸೇನಾಪಡೆ ನಿಯೋಜನೆ, ಕರ್ಫ್ಯೂ ಹೇರಲಾಗಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೆ ಜಾಟ್ ಸಮುದಾಯದವರು ರಾಜ್ಯದ ರೊಹ್ ಟಕ್, ಜಜ್ಜರ್ ಮತ್ತು ಇತರ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ನಿನ್ನೆ ಅನೇಕ ವಾಹನ ಮತ್ತು ಕಟ್ಟೈಗಳಿಗೆ ಬೆಂಕಿ ಹಚ್ಚಲಾಗಿತ್ತು.
ಪರಿಸ್ಥಿತಿಯನ್ನು ಹತೋಟಿಗೆ ತರಲಾಗದೆ ರಾಜ್ಯ ಗೃಹ ಇಲಾಖೆ ಕೇಂದ್ರ ಸರ್ಕಾರದ ನೆರವನ್ನು ಕೋರಿದೆ. ರಾಜ್ಯ ಪೊಲೀಸ್ ಪಡೆಯಲ್ಲದೆ ಕೇಂದ್ರ ಸೇನಾಪಡೆಯನ್ನು ಕೂಡ ನಿಯೋಜಿಸಲಾಗಿದೆ.
ಜಾಟ್ ಸಮುದಾಯದ ಪ್ರತಿಭಟನಾಕಾರರು ಒಬಿಸಿ ವರ್ಗದವರಿಗೆ ಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಅವರು ಶಾಸನವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು. ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರು ಇಂದಿನಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
”ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ” ಎಂದು ನಿನ್ನೆ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಶಾಂತಿ, ಸೌಹಾರ್ದತೆ ಕಾಪಾಡುವಂತೆ ಜಾಟ್ ಸಮುದಾಯದವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಮಣಿಯದ ಪ್ರತಿಭಟನಾಕಾರರು ಈ ಕುರಿತು ಶಾಸನವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಕೂಡ ರೊಹ್ ಟಕ್, ಭಿವಾನಿ, ಸೋನೆಪತ್, ಜಜ್ಝರ್, ಹಿಸಾರ್ ಮತ್ತು ಹಂಸಿ ಮೊದಲಾದ ಕಡೆ ಪ್ರತಿಭಟನೆ ಮುಂದುವರಿಯಲಿದೆ. ಪ್ರತಿಭಟನಾಕಾರರು ಮುಖ್ಯವಾಗಿ ಹೆದ್ದಾರಿ ಮತ್ತು ರೈಲ್ವೆ ನಿಲ್ದಾಣಗಳಿಗೆ ಹೋಗಿ ಅಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಅನೇಕ ಕಡೆ ರಸ್ತೆ ಮತ್ತು ರೈಲು ಸಂಚಾರಕ್ಕೆ ವ್ಯತ್ಯಯವುಂಟಾಗುತ್ತಿದೆ. ಪ್ರತಿಭಟನೆ ಆರಂಭಗೊಂಡಲ್ಲಿಂದ ಸುಮಾರು 700 ರೈಲುಗಳ ಸಂಚಾರಗಳನ್ನು ರದ್ದುಪಡಿಸಲಾಗಿದೆ.
ದೆಹಲಿ, ಹರ್ಯಾಣದಿಂದ ದೇಶದ ಇತರ ರಾಜ್ಯಗಳ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರತಿಭಟನಾಕಾರರು ತಡೆಹಿಡಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 1ರಲ್ಲಿ ದೆಹಲಿ-ಸೋನೆಪತ್ ಮಾರ್ಗವನ್ನು ತಡೆಹಿಡಿಯಲಾಗಿದೆ. ಇದು ದೆಹಲಿ ರಾಜಧಾನಿಯನ್ನು ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರವನ್ನು ಸಂಪರ್ಕಿಸುತ್ತದೆ. ನಿನ್ನೆಯ ಪ್ರತಿಭಟನೆಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.
ರೋಹ್ ಟಕ್ ನಲ್ಲಿ ಪ್ರತಿಭಟನಾಕಾರರು ಬಸ್ಸು, ಮಾಲ್, ಪೆಟ್ರೋಲ್ ಪಂಪ್ ಮತ್ತು ರಾಜ್ಯ ಹಣಕಾಸು ಸಚಿವ ಕ್ಯಾ.ಅಭಿಮನ್ಯು ಅವರ ಮನೆಗೆ ಬೆಂಕಿಯಿಟ್ಟಿದ್ದಾರೆ. ಜಿಂದ್ ನಲ್ಲಿ ರೈಲ್ವೆ ಸ್ಟೇಷನ್ ಗೆ ಬೆಂಕಿಯಿಡಲಾಗಿದೆ. ಇಂದು ಬಸೈ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಕೂಡ ಬೆಂಕಿಯಲ್ಲಿ ಹತ್ತಿ ಉರಿದಿದೆ. ಹರ್ಯಾಣ ಮೂಲಕ ಹಾದುಹೋಗುವ ಎಲ್ಲಾ ಬಸ್ ಸೇವೆಗಳನ್ನು ಹಿಮಾಚಸ ರಸ್ತೆ ಸಾರಿಗೆ ಬಂದ್ ಮಾಡಿದೆ.