ಕುಂದಾಪುರ: ಕಾರಂತಜ್ಜನ ಊರು ಕೋಟ ಕಲೆ-ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದಿದೆ. ಈ ಬಾರಿ ಇಲ್ಲಿನ ಜಿ.ಪಂ. ಕದನ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹಣಾಹಣಿಯ ಕಣವಾಗಿ ಮಾರ್ಪಟ್ಟಿದ್ದರೂ ಕೂಡ ಬಿಜೆಪಿ ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಕಾ ಕೆಲಸ ಮಾಡ್ತಿದೆ. ಒಂದು ಹಂತದಲ್ಲಿ ಬಿಜೆಪಿ ಗೆಲುವು ನಿರ್ಣಾಯಕ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದು ಪೈಪೋಟಿ ನೀಡಲು ಕಾಂಗ್ರೆಸ್ ಕೂಡ ಕಸರತ್ತು ಮಾಡ್ತಿದೆ.

(ಬಿಜೆಪಿ ಅಭ್ಯರ್ಥಿ- ರಾಘವೇಂದ್ರ ಕಾಂಚನ್)

(ಅಭ್ಯರ್ಥಿ ಪರ ಮತಯಾಚನೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ)

ಸದ್ಯ ಜಿಲ್ಲಾಪಂಚಾಯತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ರಾಘವೇಂದ್ರ ಕಾಂಚನ್ ಈ ಹಿಂದಿನ ಅವಧಿಯ ತಾ.ಪಂ. ಸದಸ್ಯರು. ಅಲ್ಲದೇ ಬಿಜೆಪಿ ಶಕ್ತಿ ಕೇಂದ್ರ ವ್ಯಾಪ್ತಿಯ ಯುವಮೋರ್ಚಾ ಮಾಜಿ ಅಧ್ಯಕ್ಷ, ಹಿಂದೂ ಸಂಘಟನೆಯಲ್ಲಿಯೂ ಸಕ್ರೀಯವಾಗಿ ಗುರುತಿಸಿಕೊಂಡವರಾಗಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವ ಸ್ವಕ್ಷೇತ್ರವಾಗಿರುವುದರಿಂದ ಶತಾಯಗತಾಯ ಗೆಲುವಿನ ತುತ್ತತುದಿಯಲ್ಲಿ ಬಿಜೆಪಿ ನಿಂತಿದೆ. ಪ್ರಮುಖವಾಗಿ ರಾಘವೇಂದ್ರ ಕಾಂಚನ್ ಅವರು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅತೀ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಹಾಲಾಡಿ ಅಭಿಮಾನಿಗಳಿಗೂ ಇದೊಂದು ಪ್ರತಿಷ್ಠೆಯ ಕಣವಾಗಿದೆ. ಹಿಂದಿನ ಅವಧಿಯಲ್ಲಿ ತಾ.ಪಂ. ಸದಸ್ಯನಾಗಿ ಮಾಡಿದ ಜನಸೇವೆ, ಜನಸಾಮಾನ್ಯರೊಂದಿಗೆ ಹೊಂದಿರುವ ನೇರ ಸಂಪರ್ಕ, ಸಾಮಾಜಿಕ ಸಂಘನೆಗಳೊಂದಿಗಿನ ಸಂಪರ್ಕದ ಸಹಕಾರದಿಂದ ಗೆಲುವು ಸುಲಭವಾಗಲಿದೆ ಎನ್ನುವುದು ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ಪ್ರಮುಖರ ಅಭಿಪ್ರಾಯ. ಕೋಟದಲ್ಲಿ ಜನಸೇವಾ ಕೇಂದ್ರವನ್ನು ಸ್ಥಾಪಿಸಿ ಅಲ್ಲಿಗೆ ಬರುವ ಅಶತರ ಬಡವರ ಪಾಲಿಗೆ ಆಶಾಕಿರಣರಾದವರು. ಸರಕಾರದಿಂದ ದೊರಕುವ ಸೌಲಭ್ಯಗಳನ್ನು ನೇರವಾಗಿ ತಲುಪಿಸಿಕೊಡುವ ಧ್ಯೇಯ ಹೊಂದಿದ ಕಾಂಚನ್ ಅವರ ದೂರದ್ರಷ್ಟಿ ಚಿಂತನೆ ಮತ ಗಳಿಕೆಗೆ ಇನ್ನೊಂದು ಬಲವಾಗಲಿದೆ.

(ಕಾಂಗ್ರೆಸ್ ಅಭ್ಯರ್ಥಿ- ತಿಮ್ಮ ಪೂಜಾರಿ)
ಇನ್ನು ಕೋಟ ಜಿಲ್ಲಾಪಂಚಾಯತ್ ಕ್ಷೇತ್ರದ ತಿಮ್ಮ ಪೂಜಾರಿ ತಾ.ಪಂ.ಮಾಜಿ ಸದಸ್ಯರಾಗಿದ್ದವರಾಗಿದ್ದಾರೆ, ಕೋಟ ಸಿ.ಎ.ಬ್ಯಾಂಕ್ ನಿರ್ದೇಶಕರಾಗಿ ೨೦ ವರ್ಷದಿಂದ ದುಡಿದು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ತಿಮ್ಮ ಪೂಜಾರಿಯವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಲಭಿಸಿದೆ. ಇತ್ತೀಚೆಗೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಪಕ್ಷದಲ್ಲಿ ಕಡೆಗಣಿಸಿದ್ದು ಅವರು ಪಕ್ಷದಿಂದ ಹೊರಗುಳಿದಿರುವುದು ಕಾರ್ಯಕರ್ತರಲ್ಲಿ ಅಸಮಧಾನವನ್ನುಂಟು ಮಾಡಿದ್ದಲ್ಲದೇ ಹಲವರು ಪಕ್ಷಕ್ಕೆ ಗುಡ್ ಬೈ ಹೇಳಿದವರು ಹಲವರಾದರೇ ಚುನಾವಣೆಯಲ್ಲಿ ಕೆಲಸ ಮಾಡದಿರುವ ನಿರ್ಧಾರವನ್ನು ಕೈಗೊಂಡ ಮಂದಿ ಹಲವರಿದ್ದಾರೆ. ಇನ್ನು ಹೆಗ್ಡೆ ಬೆಂಬಲಿಗರು ಕೋಟ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ಅನುಪಸ್ಥಿತಿ ಕಾಂಗ್ರೆಸ್ ಇಕ್ಕಟ್ಟಿಗೆ ಕಾರಣವಾಗಿದೆ. ಇದೆಲ್ಲವೂ ಬಿಜೆಪಿ ಫ್ಲಸ್ ಪಾಯಿಂಟ್ ಆಗಿದ್ದು ಗೆದ್ದೇ ಗೆಲ್ಲಬೇಕು ಎಂಬ ಪಣದೊಂದಿಗೆ ಬಿಜೆಪಿ ಹೋರಾಟ ನಡೆಸುತ್ತಿದೆ. ಕೋಟ ಬ್ಲಾಕ್ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ, ಹೆಗ್ಡೆ ಬೆಂಬಲಿಗರ ಬಂಡಾಯವನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಗೆಲುವು ಅನಿವಾರ್‍ಯವಾಗಿದೆ. ಈತನ್ಮಧ್ಯೆ ಪಕ್ಷೇತರರ ಸ್ಪರ್ಧೆಯೂ ಎರಡು ಪಕ್ಷಗಳಲ್ಲಿ ಕೊಂಚ ತಲೆನೋವಾಗಿದೆ.
ಇನ್ನು ಕ್ಷೇತ್ರದಲ್ಲಿ ಈಗಾಗಲೇ ಹಲವು ಅಭಿವ್ರದ್ಧಿ ಕಾರ್ಯಗಳಾಗಿದೆ. ಹಲವೆಡೆ ರಸ್ತೆಗಳು ಕಾಂಕ್ರೀಟಿಕರಣಗೊಂಡಿದ್ದು, ಕೆಲ ಭಾಗಗಳಲ್ಲಿ ಮಾತ್ರವೇ ರಸ್ತೆ ಸಮಸ್ಯೆ ಇದೆ. ಗೆದ್ದು ಬರುವ ಮಂದಿ ಕೊಂಚ ಗಮನವನ್ನು ಮೀನುಗರಿಕಾ ರಸ್ತೆಯತ್ತ ಹರಿಸಬೇಕಿದೆ. ಅಂತರಗಂಗೆ ಸಮಸ್ಯೆ, ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಗಮನಹರಿಸಲೇಬೇಕಾದ ಅನಿವಾರ್ಯತೆಯೂ ಇದೆ.
ಈಗಾಗಲೇ ರಾಘವೇಂದ್ರ ಕಾಂಚನ್ ಪರ ಬಿ.ಎಸ್. ಯಡಿಯೂರಪ್ಪ ಅವರೇ ಕೋಟಕ್ಕೆ ಆಗಮಿಸಿ ಸಭೆ ನಡೆಸಿ ಮತಯಾಚನೆ ಮಾಡಿದಾರೆ, ಇನ್ನು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರು ಕಾಂಚನ್ ಪರ ಮತಯಾಚನೆ ನಡೆಸುತ್ತಿದ್ದು ಬಿಜೆಪಿ ಗೆಲುವಿನ ನಾಗಾಲಾಟೋದತ್ತ ಸಾಗುವ ನಿರೀಕ್ಷೆಯನ್ನು ಪಕ್ಷದ ಪ್ರಮುಖ ನಾಯಕರು ವ್ಯಕ್ತಪಡಿಸಿದ್ದಾರೆ.