ಕರ್ನಾಟಕ

ಪಾನ್‌ಕಾರ್ಡ್‌ ಕಡ್ಡಾಯ: ಬೀದಿಗಿಳಿದ ಜ್ಯುವೆಲ್ಲರ್ಸ್‌

Pinterest LinkedIn Tumblr

Jewellers-10-2ಬೆಂಗಳೂರು: 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‌ಕಾರ್ಡ್‌ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ನಿಯಮದಿಂದ ಕಳಪೆ ಗುಣಮಟ್ಟದ ಚಿನ್ನಾಭರಣಗಳ ಮಾರಾಟ ಹಾಗೂ ರಶೀದಿ ರಹಿತ (ನಾನ್‌ ಬಿಲ್ಲಿಂಗ್‌) ವಹಿವಾಟಿಗೆ ಮುಕ್ತ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯರೂ ಆಗಿರುವ ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಟಿ.ಎ. ಶರವಣ ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ತೀರ್ಮಾನವನ್ನು ಖಂಡಿಸಿ ದೇಶಾದ್ಯಂತ ಬುಧವಾರ ಜ್ಯುವೆಲ್ಲರಿಗಳನ್ನು ಬಂದ್‌ ಮಾಡಿ ಪ್ರತಿಭಟಿಸಲಾಯಿತು. ಇದನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ರಾಜ್ಯದಲ್ಲೂ ಸುಮಾರು 25 ಸಾವಿರ ಜ್ಯುವೆಲ್ಲರಿ ಮಳಿಗೆಗಳನ್ನು ಬಂದ್‌ ಮಾಡಲಾಯಿತು. 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‌ಕಾರ್ಡ್‌ ಕಡ್ಡಾಯಗೊಳಿಸಿರುವ ನಿರ್ಧಾರವನ್ನು ವಾಪಸ್‌ ಪಡೆದು ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಯಿತು. ಬಂದ್‌ ಅಂಗವಾಗಿ ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಅವೈಜ್ಞಾನಿಕ
ಈ ಕುರಿತು ‘ಉದಯವಾಣಿ’ಯೊಂದಿಗೆ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಟಿ.ಎ. ಶರವಣ, ಕೇಂದ್ರ ಸರಕಾರದ ನಿಯಮದಿಂದ ಚಿನ್ನಾಭರಣ ಉದ್ಯಮಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. 2 ಲಕ್ಷ ರೂ. ಮೇಲ್ಪಟ್ಟ ಖರೀದಿಗೆ ಪಾನ್‌ಕಾರ್ಡ್‌ ಕಡ್ಡಾಯಗೊಳಿಸಿರುವುದು ಅತ್ಯಂತ ಅವೈಜ್ಞಾನಿಕ. ರಾಜ್ಯದ 6.10 ಕೋಟಿ ಜನರಲ್ಲಿ ಶೇ.15ರಷ್ಟು ಜನರ ಬಳಿ ಮಾತ್ರ ಪಾನ್‌ಕಾರ್ಡ್‌ ಇದೆ. ಹೀಗಿರುವಾಗ ಪಾನ್‌ಕಾರ್ಡ್‌ ಕಡ್ಡಾಯಗೊಳಿಸಿದರೆ 2 ಲಕ್ಷ ರೂ.ವರೆಗೆ ಚಿನ್ನಾಭರಣ ಖರೀದಿ ಮಾಡಲು ಬರುವ ಗ್ರಾಮೀಣ ಪ್ರದೇಶದವರು, ಬಡವರು, ಮಧ್ಯಮ ವರ್ಗದವರು ಹಿಂದೇಟು ಹಾಕುತ್ತಾರೆ ಎಂದರು.

ಸಾವಿರ ಕೋಟಿ ನಷ್ಟ
ರಾಜ್ಯದ ಜ್ಯುವೆಲ್ಲರಿಗಳು ಬುಧವಾರ ಒಂದು ದಿನ ಬಂದ್‌ ಮಾಡಿದ್ದರಿಂದ ಉದ್ಯಮಕ್ಕೆ ಉಂಟಾಗಿರುವ ಒಟ್ಟು ನಷ್ಟ 1000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
-ಉದಯವಾಣಿ

Write A Comment