ಕರ್ನಾಟಕ

ಬೆಂಗಳೂರಲ್ಲಿ ಕಟ್ಟಡದಿಂದ ಜಿಗಿದು ಛತ್ತೀಸ್‌ಘಡದ ಮೂಲದ ಯುವಕ ಆತ್ಮಹತ್ಯೆ

Pinterest LinkedIn Tumblr

sಬೆಂಗಳೂರು, ಫೆ.9- ಛತ್ತೀಸ್‌ಘಡದ ಯುವಕನೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜು(19) ಆತ್ಮಹತ್ಯೆ ಮಾಡಿಕೊಂಡ ಛತ್ತೀಸ್‌ಘಡದ ಯುವಕ. ಗಾಂಧಿನಗರದ ಗಂಗಾರಾಮ್ ಕಟ್ಟಡದ 4ನೇ ಮಹಡಿಯಲ್ಲಿ ಪಂಜಾಬಿ ಡಾಬಾ ಇದ್ದು, ಇಲ್ಲಿ ರಾಜು ಕಳೆದ 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದನು.

ಇಲ್ಲಿ ಕೆಲಸ ಮಾಡುವವರಿಗೆ ಇದೇ ಕಟ್ಟಡದಲ್ಲಿರುವ ರಾಜಾರಾಜೇಶ್ವರಿ ಗೆಸ್ಟ್‌ಹೌಸ್‌ನಲ್ಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು.  ರಾಜು 9ನೇ ತರಗತಿ ವ್ಯಾಸಂಗ ಮಾಡಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಛತ್ತೀಸ್‌ಘಡದಿಂದ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದನು. ಈತ ಕೆಲಸ ಮಾಡುವುದು ಕುಟುಂಬದವರಿಗೆ ಇಷ್ಟವಿಲ್ಲದ ಕಾರಣ, ವಿದ್ಯಾಭ್ಯಾಸ ಮುಂದುವರೆಸುವ ಸಲುವಾಗಿ ಈತನನ್ನು ಕರೆದುಕೊಂಡು ಹೋಗಲು ನಿನ್ನೆ ಈತನ ಅಣ್ಣ ಬೆಂಗಳೂರಿಗೆ ಬಂದಿದ್ದರು.

ಛತ್ತೀಸ್‌ಘಡಕ್ಕೆ ವಾಪಾಸ್ ತೆರಳಲು ಎರಡು ರೈಲ್ವೆ ಟಿಕೆಟನ್ನು ಸಹ ಮಾಡಿಸಿಕೊಂಡೇ ಬಂದಿದ್ದರು.

ನಿನ್ನೆ ಸಂಜೆ 7.30ರಲ್ಲಿ ತಮ್ಮನನ್ನು ಮನವೊಲಿಸಿ ಛತ್ತೀಸ್‌ಘಡಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡು ಅಣ್ಣ 4ನೇ ಮಹಡಿಯಿಂದ ಕೆಳಗಿಳಿದಿದ್ದಾರೆ. ಆದರೆ, ರಾಜು ಛತ್ತೀಸ್‌ಘಡಕ್ಕೆ ಹೋಗುವ ಇಷ್ಟವಿಲ್ಲದ ಕಾರಣ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Write A Comment