
ಮಂಗಳೂರು: ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಣಿಪಾಲದ ಪೆರ್ಡೂರು ಅಲಂಗಾರು ಮನೆ ನಿವಾಸಿ ತೌಸೀಫ್ ಯಾನೆ ಶೈಲು ಯಾನೆ ಮುನ್ನ (24), ಬಜ್ಪೆ ಎಂಆರ್‌ಪಿಎಲ್ ರಸ್ತೆಯ ಮುಹಮ್ಮದ್ ಯೂಸುಫ್ (28), ಕಾವೂರಿನ ಬಸವನಗರ ಮರಕಡ ನಿವಾಸಿ ಮಹೇಂದ್ರ (20) ಎನ್ನಲಾಗಿದೆ.
ಆರೋಪಿಗಳ ಪೈಕಿ ತೌಸೀಫ್ ಎಂಬಾತ ಕಲ್ಲಾಪು ಬೊಡ್ಡ ಲತೀಫ್‌ನ ಕೊಲೆಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗಿ ಜೈಲಿನಲ್ಲಿದ್ದು, ಇತ್ತೀಚೆಗಷ್ಟೇ ಬಿಡುಗಡೆ ಹೊಂದಿದ್ದ. ಮಹೇಂದ್ರ ಎಂಬಾತ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಲಿಗೆ ಮಾಡಿದ ನಗದು ಮತ್ತು ಸೊತ್ತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.