ಖರಗ್ಪುರ್: ನನಗೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಒಂದು ಕೋಟಿ ರುಪಾಯಿ ಸಂಬಳದ ಕೆಲಸ ಸಿಕ್ಕಿದೆ ಎಂದು ಹೇಳಿದರೆ ಮೊದಲು ನನ್ನ ಕುಟುಂಬ ನಂಬಲಿಲ್ಲ ಎಂದು ಖರಗ್ಪುರ್ ಐಐಟಿಯ ಪ್ರತಿಭಾನ್ವಿತ ವಿದ್ಯಾರ್ಥಿ ಬಿಹಾರದ ಮೂಲದ ವಾತ್ಸಲ್ಯ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.
21 ವರ್ಷದ ಚೌಹಾಣ್ ಅವರನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಕಂಪನಿ ವರ್ಷಕ್ಕೆ 1.2 ಕೋಟಿ ರುಪಾಯಿಗಳ ಭಾರಿ ವೇತನ ನೀಡಿ ನೇಮಕ ಮಾಡಿಕೊಂಡಿದೆ.
ವಾತ್ಸಲ್ಯನ ತಂದೆ ಚಂದ್ರಕಾಂತ್ ಸಿಂಗ್ ಸಾಮಾನ್ಯ ವೆಲ್ಡಿಂಗ್ ಶಾಪ್ ಮಾಲೀಕರಾಗಿದ್ದು, ಮೂಲತಃ ಬಿಹಾರದ ಖಗರಿಯ ಗ್ರಾಮದ ನಿವಾಸಿ. ವಾತ್ಸಲ್ಯ 2009 ರಲ್ಲಿ ನಡೆದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 382 ನೇ ರ್ಯಾಂಕ್ ಪಡೆದಿದ್ದರು.
‘ನನಗೆ ಒಂದು ಕೋಟಿ ರುಪಾಯಿ ಕೆಲಸ ಸಿಕ್ಕಿದೆ ಎಂದಾಗ ಮೊದಲು ನನ್ನ ತಂದೆ ನಂಬಲಿಲ್ಲ. ಆದರೆ ಈ ಸುದ್ದಿ ಖಚಿತಪಡಿಸಿಕೊಂಡ ನಂತರವೇ ಅವರು ನನ್ನೊಂದಿಗೆ ಮಾತನಾಡಿದರು. ಅವರು ಸಾಲ ಮಾಡಿ ನನ್ನನ್ನು ಐಐಟಿಯಲ್ಲಿ ಓದಿಸಿದ್ದಾರೆ’ ಎಂದು ಚೌಹಾಣ್ ತಿಳಿಸಿದ್ದಾರೆ. ಅಲ್ಲದೆ ಐದು ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಸಾಗುವುದು ನನಗೆ ಕಷ್ಟವೆನಿಸಲಿಲ್ಲ ಎಂದಿದ್ದಾರೆ.