ರಾಷ್ಟ್ರೀಯ

ತಮ್ಮ ಆಸ್ಪತ್ರೆಯಲ್ಲಿ ಹೆಣ್ಣು ಹುಟ್ಟಿದರೆ ಉಚಿತ ಸೇವೆ ಮಾಡ್ತಾರೆ ಈ ಡಾಕ್ಟ್ರು

Pinterest LinkedIn Tumblr

daಪುಣೆ,ಫೆ.1-ತಾವು ಸಮಾಜ ಸೇವಕರೆಂದು ತಮಗೆ ತಾವೇ ಆರೋಪಿಸಿಕೊಂಡು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಅನೇಕ ಸಮಾಜ ಸೇವಕರ ನಡುವೆ ಸದ್ದಿಲ್ಲದೆ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವವರು ಬೆರಳೆಣಿಕೆಯಷ್ಟು ಮಾತ್ರ. ಎರಡನೆ ಗುಂಪಿಗೆ ಸೇರುವ ವ್ಯಕ್ತಿ ಪುಣೆಯ ವೈದ್ಯ ಡಾ.ಗಣೇಶ್ ರಾಖ್. ಇವರು ಸಮಾಜಕ್ಕೆ ನೀಡುವ ಕೊಡುಗೆ ವಿಭಿನ್ನವಾದದ್ದು. ಇವರು ನಡೆಸುತ್ತಿರುವ ಹೆರಿಗೆ ಆಸ್ಪತ್ರೆಯಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಅವರಿಂದ ಇವರು ಯಾವುದೇ ರೀತಿಯ ಹಣವನ್ನೂ ಪಡೆಯದೆ ಉಚಿತವಾಗಿ ಹೆರಿಗೆ ಮಾಡಿಸಿ ಕಳುಹಿಸುತ್ತಾರೆ.

ಇದಕ್ಕೆ ಕಾರಣ ಜನರ ಮೌಢ್ಯ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರೂ ತಮಗೆ ಗಂಡು ಮಗು ಆಗುತ್ತದೆ ಎಂದೇ ಬರುತ್ತಾರೆ. ಹೆಣ್ಣುಮಗುವಾದರೆ ಬೇಸರದಿಂದ ತಾಯಿ ಮಗುವನ್ನು ಮಾತುಕೂಡ ಆಡಿಸದೆ ಹೋಗುತ್ತಾರೆ. ಗಂಡು ಮಗುವಾದರೆ ಸಿಹಿ ತಂದು ಎಲ್ಲರಿಗೂ ಹಂಚುತ್ತಾರೆ. ಜನರ ಈ ತಾರತಮ್ಯ ನೀತಿ ಕಂಡು ತಲೆಯೇ ಕೆಟ್ಟುಹೋಗಿದೆ ಎನ್ನುತ್ತಾರೆ ಡಾ.ರಾಖ್.

ರೋಗಿಯೊಬ್ಬ ಅಸುನೀಗಿದ ಎಂದು ಸಂಬಂಧಿಕರಿಗೆ ಹೇಳುವುದು ಎಷ್ಟು ಕಷ್ಟವೋ ನಿಮಗೆ ಹೆಣ್ಣು ಮಗುವಾಗಿದೆ ಎಂದು ಹೇಳುವುದೂ ಅಷ್ಟೇ ಕಷ್ಟ. 2007ರಲ್ಲಿ ನಾನು ಪುಣೆಯಲ್ಲಿ ನರ್ಸಿಂಗ್ ಹೋಂ ತೆರೆದು ವೈದ್ಯ ವೃತ್ತಿ ಆರಂಭಿಸಿದಾಗಿ ಇಲ್ಲಿನ ಜನರ ರೀತಿ ನೀತಿಗಳನ್ನು ತಿಳಿದು ಅಚ್ಚರಿಯಾಯಿತು. ಹೆರಿಗೆಗಾಗಿ ತಮ್ಮ ಹೆಂಡತಿ ಅಥವಾ ಸೊಸೆಯನ್ನು ಇಲ್ಲಿಗೆ ಕರೆತರುವ ಪ್ರತಿಯೊಬ್ಬರು ಗಂಡು ಮಗುವಿನ ನಿರೀಕ್ಷೆಯಲ್ಲೇ ಇರುತ್ತಾರೆ. ಹೆಣ್ಣುಮಗುವಾದರೆ ಬೇಸರದಿಂದ ಹೊರಟುಹೋಗುತ್ತಾರೆ. ಅಷ್ಟೇ ಅಲ್ಲ. ನಮಗೆ ಹೆಣ್ಣುಮಗುವಾಗಿರುವುದರಿಂದ ಆಸ್ಪತ್ರೆ ಬಿಲ್‌ನಲ್ಲಿ ಡಿಸ್ಕೌಂಟ್ ಕೊಡಿ ಎಂದು ಕೇಳುತ್ತಾರೆ. ಇದನ್ನು ನೋಡಿ ಬೇಸರಗೊಂಡ ನಾನು 2012ರ ಜನವರಿ 3ರಂದು ಮುಲ್ಗಿ ವಚ್ವಾ ಅಭಿಯಾನ್ (ಹೆಣ್ಣು ಶಿಶು ರಕ್ಷಣಾ ಆಂದೋಲನ) ಆರಂಭಿಸಿದೆ.

ಹೆಣ್ಣುಮಗು ಹುಟ್ಟಿದರೆ ಹಣ ತೆಗೆದುಕೊಳ್ಳುವುದನ್ನು ಕೈಬಿಟ್ಟೆ. ಇದರೊಂದಿಗೆ ಹೆಣ್ಣುಮಗು ಹುಟ್ಟಿದಾಗ ನಾವೇ ಸಿಹಿತಂದು ಎಲ್ಲರಿಗೂ ಹಂಚಿ ಸಂಭ್ರಮ ಆಚರಿಸುವ ಪದ್ಧತಿಯನ್ನು ಜಾರಿಗೆತಂದೆ. ನಾನು ಈ ವ್ಯವಸ್ಥೆ ಮಾಡಿದ ನಂತರ ನನ್ನ ಆಸ್ಪತ್ರೆಯಲ್ಲಿ 464ಹೆಣ್ಣು ಶಿಶುಗಳು ಜನಿಸಿವೆ. ಅದರಲ್ಲಿ ಯಾವುದಕ್ಕೂ ನಾವು ಹಣ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಇಷ್ಟಾದರೂ ಡಾ.ರಾಖ್ ಅವರು ಯಾವುದೇ ಪ್ರಚಾರಕ್ಕೂ ಬಾಯಿಬಿಡದೆ ತಮ್ಮ ಸೇವೆ ಮುಂದುವರೆಸಿದ್ದಾರೆ. ನಾವು ಈ ಕಾರ್ಯಕ್ರಮ ಆರಂಭಿಸಿದಾಗ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ತುಂಬಾ ಸಂತೋಷ ಪಟ್ಟಿದ್ದರು. ಹೆಣ್ಣು ಶಿಶುವಿನ ಬಗ್ಗೆ ಜನ ಹೊಂದಿರುವ ಈ ಭಾವನೆ ಸಮಾಜಕ್ಕಂಟಿದ ಶಾಪ ಎಂದು ಡಾ.ರಾಖ್ ಸ್ಮರಿಸುತ್ತಾರೆ.

ಈಗಾಗಲೇ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳ ನಡುವಿನ ಅನುಪಾತ ಭಾರೀ ವ್ಯತ್ಯಯವಾಗಿದೆ. 1961ರಲ್ಲಿ ಈ ಅನುಪಾತ 1ಸಾವಿರ ಹುಡುಗರಿಗೆ 976 ಹುಡುಗಿಯರಿದ್ದರು. 2011ರಲ್ಲಿ ಅದು 914ಕ್ಕೆ ಇಳಿಯಿತು. ಇದು ಈಗೆ ಮುಂದುವರೆದರೆ ಮುಂದೆ ಭಾರೀ ಗಂಡಾಂತರವನ್ನೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಈ ವೈದ್ಯರು.

Write A Comment