ನವದೆಹಲಿ, ಜ.28-ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಭಯೋತ್ಪಾದಕರನ್ನು ಹೊರಹಾಕಲು 1984ರಲ್ಲಿ ಅಮೃತಸಾರದ ಸ್ವರ್ಣಮಂದಿರದ ಮೇಲೆ ಮಿಲಿಟರಿ ದಾಳಿ ನಡೆಸಿದ್ದನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ‘ದಿ ಟರ್ಬುಲೆಂಟ್ ಇಯರಸ್: 1980-96’ ಕೃತಿಯ 2ನೆ ಸಂಚಿಕೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. 1980-84ರ ಅವದಿಯಲ್ಲಿ ಪಂಜಾಬ್‌ನಲ್ಲಿ ರಾಜಕೀಯ ಅತ್ಯಂತ ಪ್ರಕ್ಷುಬ್ಧವಾಗಿತ್ತು. 1981ರಲ್ಲಿ ಅಕಾಲಿ ದಳದ ಸದಸ್ಯರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಮನವಿಯೊಂದನ್ನು ಸಲ್ಲಿಸಿ, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನ ರಾಜ್ಯಗಳ ನಡುವೆ ಪಂಜಾಬಿನ ನದಿ ನೀರು ಹಂಚಿಕೆ ಸೇರಿದಂತೆ ರಾಜಕೀಯ, ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತಾದ 45 ಬೇಡಿಕೆಗಳನ್ನು ಮುಂದಿಟ್ಟಿದ್ದಲ್ಲದೆ, ತನ್ನ ಅಹವಾಲುಗಳನ್ನು ಮಂಡಿಸಿತ್ತು.
ಪಂಜಾಬ್ ರಾಜ್ಯ ಏಕೀಕರಣವಾದ ಸಂದರ್ಭ ಹರ್ಯಾಣದ ಕೆಲವು, ಚಂಡೀಗಢದ ಕೆಲವು ಹಾಗೂ ಗಡಿ ಭಾಗಗಳ ತಾಲ್ಲೂಕುಗಳು, ಜಿಲ್ಲೆಗಳನ್ನು ಪಂಜಾಬಿಗೆ ಸೇರಿಸುವಂತೆ ಒತ್ತಾಯಿಸಿದ್ದರು. ಇದನ್ನೆಲ್ಲ ಒಳಗೊಂಡಿದ್ದ ಆನಂದ್‌ಪುರ್ ಸಾಹಿಬ್ ನಿರ್ಣಯದಲ್ಲಿ ಈ ಎಲ್ಲಾ ಅಂಶಗಳನ್ನೂ ಚರ್ಚಿಸಲಾಗಿತ್ತು. ದಿನಕಳೆದಂತೆ ಭಯೋತ್ಪಾದಕತೆ ಮಿತಿಮೀರತೊಡಗಿತ್ತು. ಪೂರ್ಣಮಂದಿರ ಖಲಿಸ್ಥಾನ್ ಪ್ರತ್ಯೇಕತಾವಾದಿಗಳ ನೆಲೆಯಾಗಿತ್ತು ಎಂದು ಮುಖರ್ಜಿ ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ಭಯೋತ್ಪಾದಕರಿಂದ ಪಂಜಾಬ್ ರಕ್ಷಣೆ ಅದ್ಯ ವಿಷಯವಾಗಿತ್ತು.
1981ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ರಾಜ್ಯಸಭೆಯಲ್ಲಿ ತನ್ನನ್ನು ಭೇಟಿ ಮಾಡಿ ಪಂಜಾಬ್ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಪಂಜಾಬ್ ಹಿತವನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದರು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಭಯೋತ್ಪಾದಕತೆ ಭಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ರಾಷ್ಟ್ರಪತಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.