ನವದೆಹಲಿ/ಜೈಪುರ: ಮಂಗಳವಾರ ರಾಜಸ್ಥಾನದ ಜೈಸೆಲ್ಮೇರ್ ಬಳಿ ವಾಯುಪಡೆ ವಿಮಾನ ಹೊಡೆದುರುಳಿಸಿದ ಬಲೂನು ಅಮೆರಿಕದಲ್ಲಿ ನಿರ್ಮಿತವಾಗಿದ್ದು, ಪಾಕಿಸ್ತಾನದಿಂದ ಭಾರತದ ವಾಯುಗಡಿಯೊಳಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬಲೂನನ್ನು ಭಾರತವು ವಾಯು ದಾಳಿ ನಡೆಸಲು ತೆಗೆದುಕೊಳ್ಳುವ ಸಮಯ ಮತ್ತು ನಿಖರತೆ ಕುರಿತು ಅಂದಾಜಿಸಲು ಭಾರತದೊಳಗೆ ಕಳುಹಿಸಿರುವ ಸಾಧ್ಯತೆ ಇದೆ. 3 ಮೀಟರ್ ವ್ಯಾಸದ ಬಲೂನು ಇದಾಗಿದ್ದು, ಇದರಲ್ಲಿ ಹೀಲಿಯಂ ತುಂಬಿಸಲಾಗಿತ್ತು. ಅದರ ಮೇಲೆ ‘ಹ್ಯಾಪಿ ಬರ್ತ್ಡೇ’ ಎಂದು ಬರೆದಿತ್ತು. ಬಲೂನು 25 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು. ಇದನ್ನು ರೇಡಾರ್ಗಳ ಮೂಲಕ ಪತ್ತೆ ಹಚ್ಚಿದ ವಾಯು ಪಡೆ ತಕ್ಷಣ ಕಾರ್ಯಾಚರಣೆ ನಡೆಸಿ ಸುಖೋಯ್ 30 ವಿಮಾನದ ಮೂಲಕ ಬಲೂನನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯು ಗಡಿಯೊಳಗೆ ಹೊಳೆಯುವ ವಸ್ತುವೊಂದು ಪತ್ತೆಯಾಗಿತ್ತು. ಅದರನ್ನು ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದು, ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
ಸುಖೋಯ್ ವಿಮಾನ ಹೊಡೆದುರುಳಿಸಿರುವ ಬಲೂನಿನಲ್ಲಿ ಯಾವುದೇ ಸ್ಪೋಟಕ ಅಥವಾ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.