ರಾಷ್ಟ್ರೀಯ

ಮೋದಿಗೆ ಬಾಲಗ್ರಹ : 12 ರಿಂದ 15 ವರ್ಷದ ಮಕ್ಕಳನ್ನು ಸ್ಫೋಟಿಸಿ ಪ್ರಧಾನಿ ಹತ್ಯೆಗೆ ಐಎಸ್ ಸಂಚು

Pinterest LinkedIn Tumblr

Modi-with-childrenನವದೆಹಲಿ, ಜ. ೨೪ – ಬೆಂಗಳೂರು ನಗರ ಸೇರಿದಂತೆ ದೇಶದ ಹಲವೆಡೆ ರಾಷ್ಟ್ರೀಯ ತನಿಖಾದಳ ಶಂಕಿತ ಉಗ್ರರ ಬೇಟೆ ಮುಂದುವರಿಸಿರುವಾಗಲೇ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರಮೋದಿಯವರ ಹತ್ಯೆಗೆ ಐ.ಎಸ್. ರೂಪಿಸಿದ್ದ ಸಂಚು ಬಯಲಾಗಿದೆ. ಮಕ್ಕಳನ್ನು ಆತ್ಮಾಹುತಿ ಬಾಂಬರ್‌ಗಳಂತೆ ಬಳಸಿ ಪ್ರಧಾನಿ ನರೇಂದ್ರಮೋದಿ ಹತ್ಯೆಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರಮೋದಿಯವರ ಹತ್ಯೆಗೆ ಮಕ್ಕಳ ಆತ್ಮಹತ್ಯಾ ದಳವನ್ನು ಐ.ಎಸ್. ರೂಪಿಸಿದ್ದನ್ನು ಪತ್ತೆಹಚ್ಚಿದ ಕೇಂದ್ರದ ಗುಪ್ತದಳ ಈ ಮಾಹಿತಿಯನ್ನು ಪ್ರಧಾನಿಯವರ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಎಸ್.ಪಿ.ಜಿಗೆ ರವಾನಿಸಿದೆ.
ಕಳೆದ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರಮೋದಿ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ ಹೊರಡುವಾಗ ಭದ್ರತೆಯನ್ನು ಲೆಕ್ಕಿಸದೇ ಮಕ್ಕಳ ಬಳಿಗೆ ತೆರಳಿ ಸ್ವಾತಂತ್ರ್ಯ ಶುಭಾಷಯ ಸ್ವೀಕರಿಸಿ ಅವರ ಮೈದಡವಿ, ಗಲ್ಲಚಿವುಟಿ ಸಂತಸದಿಂದ ಅವರ ಜತೆ ನಲಿದಿದ್ದನ್ನು ಗಮನಿಸಿದ್ದ ಐ.ಎಸ್. ಉಗ್ರರು ಮಕ್ಕಳ ಆತ್ಮಹತ್ಯಾ ಬಾಂಬರ್‌ಗಳನ್ನು ರೂಪಿಸುವ ಕೆಲಸಕ್ಕೆ ಕೈ ಹಾಕಿರುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕಾಗಿ 12 ರಿಂದ 15 ವರ್ಷದ ಮಕ್ಕಳಿಗೆ ಶಸ್ತ್ರಾಸ್ತ್ರ ಹಾಗೂ ಸ್ಫೋಟ ತರಬೇತಿ ನೀಡಿ ಆತ್ಮಹತ್ಯಾ ಬಾಂಬರ್‌ಗಳನ್ನು ಸಿದ್ಧ ಮಾಡಿರುವುದು ಬಹಿರಂಗಗೊಂಡಿದೆ.
ಉಗ್ರರ ಈ ದಾಳಿಯ ಬಗ್ಗೆ ಎಸ್.ಪಿ.ಜಿ.ಗೆ ಕಟ್ಟೆಚ್ಚರದ ನೋಟಿಸನ್ನು ಜಾರಿ ಮಾಡಲಾಗಿದೆ.

ಭದ್ರತಾ ಉಲ್ಲಂಘನೆ ಬೇಡ
ಮಕ್ಕಳನ್ನು ಬಳಸಿ ಪ್ರಧಾನಿ ಹತ್ಯೆಗೆ ಉಗ್ರರು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಎಸ್.ಪಿ.ಜಿಯ ಹಿರಿಯ ಸಲಹೆಗಾರರಿಗೆ ಎಲ್ಲಾ ಮಾಹಿತಿ ರವಾನಿಸಲಾಗಿದ್ದು, ಯಾವುದೇ ಕಾರಣಕ್ಕೂ ಭದ್ರತೆಯನ್ನು ನಿರ್ಲಕ್ಷಿಸಿ ಎಲ್ಲಿಗೂ ಹೋಗದಂತೆ ಪ್ರಧಾನಿಯವರಿಗೆ ಮನವರಿಕೆ ಮಾ‌ಡಿಕೊಡುವಂತೆಯೂ ಎಸ್.ಪಿ.ಜಿ.ಗೆ ಸೂಚನೆ ನೀಡಲಾಗಿದೆ.
ಮಕ್ಕಳನ್ನು ಬಳಸಿ ಪ್ರಧಾನಿ ಹತ್ಯೆಯ ಸಂಚಿನ ಹಿನ್ನೆಲೆಯನ್ನು ಗಣರಾಜ್ಯೋತ್ಸವದಂದು ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ದೆಹಲಿ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಉಗ್ರರ ಸಂಭವನೀಯ ದಾಳಿಗಳನ್ನು ತಡೆಯಲು ವಿಶೇಷ ದಳಗಳನ್ನು ರಚಿಸಲಾಗಿದೆ.
ವಿಡಿಯೋ ಬಿಡುಗಡೆ
12ರ ವರ್ಷದ ಮೇಲ್ಪಟ್ಟ ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ವಿಡಿಯೋ ಚಿತ್ರಗಳನ್ನು ಐ.ಎಸ್. ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಇದರಲ್ಲಿ ಐ.ಎಸ್. ಉಗ್ರರು ಮಕ್ಕಳಿಗೆ ಮಿಷನ್‌ಗನ್ ಹಾಗೂ ರಾಕೆಟ್ ಬಳಕೆಯ ತರಬೇತಿ ದೃಶ್ಯಗಳಿವೆ. ಪಾಕ್ ಆಕ್ರಮಿತ ಕಾಶ್ಮೀರ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.

Write A Comment