ಮಂಡ್ಯ, ಜ.19- ಸಾಮೂಹಿಕ ನಾಯಕತ್ವ ದಲ್ಲಿ ಚುನಾವಣೆ ಎದುರಿಸು ತ್ತೇವೆ. ಜಿಪಂ ಮತ್ತು ತಾಪಂ ಚುನಾವಣೆ ಬಳಿಕ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ವಾಗಲಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷ ಹಾಗೂ ರಾಜ್ಯ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯ ನಾಯಕರ ಜತೆ ಚರ್ಚಿಸಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಪ್ರಸ್ತುತ ಚುನಾವಣೆಗಳು ಸಾಮೂಹಿಕ ನಾಯ ಕತ್ವದಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಹೇಳಿಕೆಗೆ ಸದಾನಂದಗೌಡರು ತಿರುಗೇಟು ನೀಡಿದ್ದಾರೆ. ರಾಜ್ಯದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಯಾವುದೇ ಕಾರಣಕ್ಕೂ ಸೇರುವುದಿಲ್ಲ. ಬೆಳಗಾವಿ ಪಾಲಿಕೆ ಯಲ್ಲಿ ಮಹಾರಾಷ್ಟ್ರ ಬಾವುಟ ಹಾರಿಸಿದ್ದಾಗ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ್ದೆ ಎಂದು ತಿಳಿಸಿದ್ದಾರೆ.