
ಉಡುಪಿ: ಅಪ್ರಾಪ್ತ ಯುವತಿಯನ್ನು ಅಪಹರಿಸಿ ಬಾಲ್ಯ ವಿವಾಹವಾದ ಪ್ರಕರಣದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜ. 14ರಂದು ಶಿಕ್ಷೆ ಪ್ರಕಟಿಸಿದೆ.
ಮದುವೆಯಾದ ಆರೋಪಿ ಆರೂರು ಗ್ರಾಮ ಕುಂಜಾಲುವಿನ ಸುದರ್ಶನ ಕಿರಣ (28), ಆತನಿಗೆ ಸಹಕರಿಸಿದ್ದ ಬ್ರಹ್ಮಾವರದ ಗುರುರಾಜ ಹಾಂಡಾ (26) ಶಿಕ್ಷೆಗೊಳಪಟ್ಟವರು.
ಪ್ರಥಮ ಆರೋಪಿಗೆ ಕಲಂ 65, 471 ಮತ್ತು 9ರ ಅನ್ವಯ ಒಟ್ಟು 3 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 3 ಸಾವಿರ ರೂ. ದಂಡ, 2ನೇ ಆರೋಪಿ ಗುರುರಾಜನಿಗೆ ಕಲಂ 465, 471ರ ಅನ್ವಯ ಒಟ್ಟು 2 ವರ್ಷ ಜೈಲುಶಿಕ್ಷೆ, ೨ ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತ 5 ಸಾವಿರ ರೂ. ಗಳನ್ನು ನೊಂದ ಯುವತಿಗೆ ರಿಹಾರವಾಗಿ ನೀಡಬೇಕು. ಹಾಗೆಯೇ 2ನೇ ಆರೋಪಿಯಿಂದ ವಶಕ್ಕೆ ಪಡೆದಿದ್ದ 20 ಸಾವಿರ ರೂ. ಮತ್ತು ಸುಳ್ಳು ದಾಖಲೆ ಸೃಷ್ಟಿಸಲು ಪ್ರಮುಖ ಆರೋಪಿಯಿಂದ ಪಡೆದ ಹಣವನ್ನು ಸರಕಾರ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶಿಸಿದೆ.
ಸುದರ್ಶನ ಕಿರಣನು 2010 ಆ. 2ರಂದು ಭಯ ಹುಟ್ಟಿಸಿ ಬಾಲಕಿಯನ್ನು ಅಪಹರಿಸಿದ್ದ. ಆನಂತರ ವೈದ್ಯಾಧಿಕಾರಿಗಳಿಂದ ಸುಳ್ಳು ದಾಖಲೆ ಪಡೆದು ಉಡುಪಿಯ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಹುಡುಗಿ ಅಪ್ರಾಪ್ತ ವಯಸ್ಕಳು ಎನ್ನುವುದನ್ನು ಮರೆಮಾಚಿ ಮದುವೆ ನೋಂದಣಿ ಮಾಡಿಸಿದ್ದ. ಆಕೆಯನ್ನು ಬೇರೆಡೆಗೆ ಕರೆದೊಯ್ದು ಲೈಂಗಿಕ ಅಪರಾಧ ಎಸಗಿದ್ದ. ಸುಳ್ಳು ದಾಖಲೆ ಸೃಷ್ಟಿಸಲು ಗುರುರಾಜ ಸಹಕರಿಸಿದ್ದ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಬಂಧನವಾಗಿತ್ತು. ಅಂದಿನ ಬ್ರಹ್ಮಾವರ ಇನ್ಸ್ಪೆಕ್ಟರ್ ಜಿ. ಕೃಷ್ಣಮೂರ್ತಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ್ ಅವರು ಗುರುವಾರ ತೀರ್ಪು ನೀಡಿದ್ದಾರೆ.
ಪ್ರಧಾನ ಸರಕಾರಿ ಅಭಿ ಯೋಜಕ ಟಿ.ಎಸ್. ಜಿತೂರಿ ಅವರು ಪ್ರಾಸಿಕ್ಯೂಶನ್ ಪರ ವಾದಿಸಿದ್ದರು.
(ಸಾಂದರ್ಭಿಕ ಚಿತ್ರ)