ಲಂಡನ್: ಆರೋಗ್ಯ ಲಾಭಕ್ಕಾಗಿ ‘ಹಸಿರು ಚಹಾ’ ಕುಡಿಯುವುದನ್ನು ನೀವು ಇಷ್ಟ ಪಡುತ್ತಿರಬಹುದು. ಆದರೆ ‘ಹಸಿರು ಕಾಫಿ’ ಕುಡಿಯುವ ಬಗ್ಗೆ ಏನೆನ್ನುತ್ತೀರಿ? ಹಸಿರು ಚಹಾದಂತೆಯೇ ಹಸಿರು ಕಾಫಿ ಕೂಡಾ ದೇಹಾರೋಗ್ಯಕ್ಕೆ ಸೂಪರ್ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಏನಿದು ‘ಹಸಿರು ಕಾಫಿ’ ಎಂದು ಕುತೂಹಲಗೊಂಡಿದ್ದೀರಲ್ಲವೇ? ಹೌದು. ಹಸಿರು ಕಾಫಿ ಎಂದರೆ ರೋಸ್ಟ್ ಮಾಡದ ಕಾಫಿ ಬೀಜ. ರೋಸ್ಟ್ ಮಾಡುವ ಪ್ರಕ್ರಿಯೆಯಲ್ಲಿ ಕಾಫಿ ಬೀಜಗಳಲ್ಲಿ ಇರುವ ಕೆಮಿಕಲ್ ಕ್ಲೋರೋಜೆನಿಕ್ ಆಸಿಡ್ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ. ರೋಸ್ಟ್ ಮಾಡದ ಅಂದರೆ ಹಸಿರು ಕಾಫಿ ಬೀಜಗಳಲ್ಲಿ ಕೆಮಿಕಲ್ ಕ್ಲೋರೋಜೆನಿಕ್ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ. ಹಸಿರು ಕಾಫಿ ಬೀಜಗಳಲ್ಲಿ ಇರುವ ಈ ಕೆಮಿಕಲ್ ಕ್ಲೋರೋಜೆನಿಕ್ ಆಸಿಡ್ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ತೂಕ ನಷ್ಟ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಅತ್ಯುತ್ತಮ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಹಸಿರು ಕಾಫಿ ಬೀಜಗಳು ಕೊಬ್ಬನ್ನೂ ಬಲು ಬೇಗನೇ ಕರಗಿಸುತ್ತವೆ. ಹಸಿರು ಕಾಫಿ ಬಳಸುತ್ತಿದ್ದರೆ ಕೊಬ್ಬು ಕರಗಿಸಲು ಪ್ರತ್ಯೇಕವಾಗಿ ವ್ಯಾಯಾಮ, ಆಹಾರದಲ್ಲಿ ಪಥ್ಯದ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಸಿರು ಕಾಫಿಯಲ್ಲಿರುವ ಕೆಮಿಕಲ್ ಕ್ಲೋರೋಜೆನಿಕ್ ಆಸಿಡ್ ಅತಿಯಾದ ರಕ್ತದ ಒತ್ತಡವನ್ನೂ ನಿವಾರಿಸುತ್ತದೆ ಎಂದು ಹೇಳಲಾಗಿದೆ.