
ಬೆಂಗಳೂರು: ಮನೆ ಎದುರು ಆಟವಾಡುತ್ತಿದ್ದ ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ, ಮುಖಕ್ಕೆ ಕಚ್ಚಿರುವ ಘಟನೆ ಆವಲಹಳ್ಳಿ ಸಮೀಪದ ಮೇಡಹಳ್ಳಿಯಲ್ಲಿ ಸೋಮವಾರ ನಡೆದಿದೆ. ಕೇಂಬ್ರಿಡ್ಜ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸತೀಶ್ ಮತ್ತು ಹೇಮಾ ದಂಪತಿ ಪುತ್ರಿಯಾದ ಪೂರ್ವಿ ನಾಯಿಯಿಂದ ಕಡಿತಕ್ಕೆ ಒಳಗಾದ ಮಗು.
ಗೃಹಿಣಿಯಾಗಿರುವ ಹೇಮಾ ಅವರು ಸಮೀಪದ ಅಜ್ಜಿ ಮನೆಗೆ ಪುತ್ರಿಯನ್ನು ಆಟವಾಡಲು ಬಿಟ್ಟು ಮನೆ ಕೆಲಸ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಮತ್ತೊಂದು ಮಗುವಿನಜತೆ ಪೂರ್ವಿ ಆಟವಾಡಿಕೊಂಡಿದ್ದಳು ಎಂದು ಸ್ಥಳೀಯರು ತಿಳಿಸಿದರು.
ಮಧ್ಯಾಹ್ನ 12.30ರ ಸುಮಾರಿಗೆ ಮನೆ ಬಳಿ ಬಂದಿರುವ ಹುಚ್ಚು ನಾಯಿ, ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಒಮ್ಮೆಲೆ ಎಗರಿ ಮುಖಕ್ಕೆ ಮನಬಂದಂತೆ ಕಚ್ಚಿದೆ. ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ನಾಯಿ ಓಡಿ ಹೋಯಿತು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿದರು.
ಘಟನೆಯಲ್ಲಿ ಮಗುವಿನ ಎಡಗಣ್ಣು, ಮೂಗು, ಕೆನ್ನೆ, ಕಿವಿ ಹಾಗೂ ತುಟಿಗೆ ತೀವ್ರ ಗಾಯವಾಗಿದೆ. ರೇಬಿಸ್ ರೋಗದ ಭೀತಿ ಇರುವುದರಿಂದ ಮಗುವಿಗೆ ಲಸಿಕೆ ನೀಡಿ, ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಭಟ್ಟರಹಳ್ಳಿಯ ಶ್ರೀ ಸಾಯಿ ಆರ್ಥೊಪೇಡಿಕ್ ಆಸ್ಪತ್ರೆ ವೈದ್ಯರು ತಿಳಿಸಿದರು.