ನವದೆಹಲಿ, ಡಿ.31-ಐಎಸ್‌ಐಎಸ್ ಗೂಢಚಾರಿ ಏಜೆಂಟ್‌ರಿಗೆ ಯಾವುದೇ ದಾಖಲೆ ಪಡೆಯದೆ ಸಿಮ್‌ಕಾರ್ಡ್ ಮಾರಾಟ ಮಾಡಿದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಅಂಕುಶ್ ಖಂಡೇಲ್ವಾಲಾ ಎಂಬ 28 ವರ್ಷದ ವ್ಯಕ್ತಿ ಈಗಾಗಲೇ ವ್ಯಕ್ತಿಗಳ ಪೂರ್ವಾಪರ ದಾಖಲೆ ಪಡೆಯದೆ ಸಾಕಷ್ಟು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದ್ದಾನೆ. ಅದರಲ್ಲಿ ಇಸ್ಲಾಮಿಕ್ ಉಗ್ರರೂ ಸೇರಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಆರ್.ಎಸ್.ಯಾದವ್ ತಿಳಿಸಿದ್ದಾರೆ. ಬಂಧಿತನಿಂದ 205 ಸಕ್ರಿಯ ಪೂರ್ವ (ಆಕ್ಟಿವೇಟ್ ಆಗದ ) ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವೆಲ್ಲ ನಕಲಿ ಗುರುತಿನ ಚೀಟಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮೊದಲು ನಾವು ಬಂಧಿಸಿದ್ದ ಶಂಕಿತ ಐಎಸ್ ಉಗ್ರರ ಬಳಿ ದೆಹಲಿ ನೋಂದಾಯಿತ ವೊಡಾಫೋನ್ ನಂಬರ್‌ಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ನಾವು ತನಿಖೆ ಆರಂಭಿಸಿದ್ದೆವು. ತನಿಖೆ ವೇಳೆ ಇಂದು ರಾಜಸ್ಥಾನ ಮೂಲದ ಖಂಡೇಲ್ವಾಲಾ ಸಿಕ್ಕಿಹಾಕಿಕೊಂಡಿದ್ದಾನೆ. ಮಂಗಳವಾರ ಖಂಡೇಲ್ವಾಲಾನ ಸಿಮ್ ಮಾರಾಟದ ಬಗ್ಗೆ ಸುಳಿವು ದೊರೆತಿತ್ತು. ಇಂದು ಅವನನ್ನು ಆರೆಸ್ಟ್ ಮಾಡಿದ್ದೇವೆ ಎಂದು ಯಾದವ್ ಹೇಳಿದ್ದಾರೆ.
ಖಂಡೇಲ್ವಾಲಾ ಯಾವುದೇ ದಾಖಲೆಗಳು, ಗುರುತು ಪರಿಚಯಗಳನ್ನು ಕೇಳದೆ ತಲಾ 500 ರೂ.ಗಳಿಗೆ ಸಿಮ್ ಮಾರಾಟ ಮಾಡುತ್ತಿದ್ದ. ಪ್ರಾಥಮಿಕ ತನಿಖೆಯಲ್ಲಿ ಕೃತ್ಯಗಳನ್ನು ಒಪ್ಪಿಕೊಂಡಿರುವ ಖಂಡೇಲ್ವಾಲಾ 28 ಜನರ ಮೊಬೈಲ್ ನಂಬರ್ ನೀಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.