ಕರ್ನಾಟಕ

ವಿಧಾನಪರಿಷತ್ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಜಯ; ಬಿಜೆಪಿಗೆ ಮುಖಭಂಗ- ಹಾಸನ: ಕುಸಿದ ಜೆಡಿಎಸ್ ಭದ್ರಕೋಟೆ

Pinterest LinkedIn Tumblr

cong

ಬೆಂಗಳೂರು, ಡಿ.30: ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ ಇಪ್ಪತ್ತೈದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 13ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. ವಿಪಕ್ಷ ಬಿಜೆಪಿ 6 ಸ್ಥಾನಗಳನ್ನಷ್ಟೇ ಉಳಿಸಿ ಕೊಂಡಿದ್ದು, ಜೆಡಿಎಸ್ 4 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು 2 ಸ್ಥಾನಗಳಲ್ಲಿ ಜಯದ ನಗೆಬೀರಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಹೇಳಲಾದ ಮೇಲ್ಮನೆಯ ಇಪ್ಪತ್ತೈದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ-ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಸೃಷ್ಟಿಯಾಗಿತ್ತು. ಅಲ್ಲದೆ, ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಚುನಾವಣಾ ಕಣ ಮತ್ತಷ್ಟು ರಂಗೇರಿತ್ತು. ಇದೀಗ ಅಚ್ಚರಿಯ ಫಲಿತಾಂಶ ಪ್ರಕಟವಾಗಿದೆ.

ಯತ್ನಾಳ್ ಗೆಲುವು: ಬೆಳಗಾವಿಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿವೇಕ ರಾವ್ ಪಾಟೀಲ್ ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯದ ದಾಖಲೆ ಬರೆದಿದ್ದಾರೆ. ಅತ್ತ ವಿಜಯಪುರದಲ್ಲಿ ಬಿಜೆಪಿ ಉಚ್ಚಾಟಿತ, ಪಕ್ಷೇತರ ಅಭ್ಯರ್ಥಿ ಬಸವನಗೌಡ ಪಾಟೀಲ್ ಯತ್ನಾಳ್ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಸೋಲಿನ ರುಚಿಯನ್ನುಣಿಸಿದ್ದಾರೆ.

ಅಚ್ಚರಿ ಫಲಿತಾಂಶ: ಜೆಡಿಎಸ್ ಭದ್ರಕೋಟೆ ಎಂದೇ ಭಾವಿಸಲಾಗಿದ್ದ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ತೆನೆ ಹೊತ್ತ ಮಹಿಳೆಗೆ ಭಾರೀ ಹಿನ್ನಡೆಯಾಗಿದೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎ. ಗೋಪಾಲಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ರವಿ ಗೆಲುವು ಸಾಧಿಸಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರ ಸ್ವಾಮಿಗೆ ಈ ಫಲಿತಾಂಶ ತೀವ್ರ ಹಿನ್ನಡೆಯಾಗಿದೆ. ತಮ್ಮ ಬದ್ಧ ಎದುರಾಳಿಗಳಾದ ಹಾಸನ ಜಿಲ್ಲಾ ಉಸ್ತುವಾರಿ ಎ.ಮಂಜು ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಮಾರ್ಮಾಘಾತ: ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್ ಗೆಲುವು ಸಾಧಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪರಿಗೆ ಆಘಾತವನ್ನುಂಟು ಮಾಡಿದ್ದಾರೆ.

ಧಾರವಾಡ ದ್ವಿಸದಸ್ಯ ಕ್ಷೇತ್ರದಲ್ಲಿ ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಗೆಲುವು ಸಾಧಿಸಿದ್ದು, ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಲಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸಿ.ಆರ್.ಮನೋಹರ್ ಗೆಲುವು ಸಾಧಿಸಿದ್ದಾರೆ.

ಸಂಸದರಾದ ಕೆ.ಎಚ್.ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ತಮ್ಮ ಬೆಂಬಲಿಗರಿಗೆ ಕೋಲಾರ ಕ್ಷೇತ್ರದ ಟಿಕೆಟ್ ಕೊಡಿಸಲು ತೀವ್ರ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮುನಿಯಪ್ಪ ತಮ್ಮ ಬೆಂಬಲಿಗ ಅನಿಲ್‌ಕುಮಾರ್‌ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೂ ಅವರಿಗೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ 804 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯ ಎದುರು ಪರಾಭವಗೊಂಡು ಮುಖಭಂಗ ಅನುಭವಿಸಿದ್ದಾರೆ.

ದ್ವಿ ಸದಸ್ಯ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ, ಧಾರವಾಡ, ಮೈಸೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಸಾಧಿಸಿದೆ. ಬಳ್ಳಾರಿಯಿಂದ ಕಾಂಗ್ರೆಸ್ಸಿನ ಕೆ.ಸಿ.ಕೊಂಡಯ್ಯ, ರಾಯಚೂರಿನಿಂದ ಕಾಂಗ್ರೆಸ್ ಪಕ್ಷದ ಬಸವರಾಜ ಪಾಟೀಲ ಇಟಗಿ ಗೆಲುವು ಸಾಧಿಸಿದ್ದಾರೆ.

ವಿಜೇತರು: ಕಾಂಗ್ರೆಸ್: ಬೆಂ.ಗ್ರಾಮಾಂತರ-ಎಸ್.ರವಿ, ಬೆಂ.ನಗರ-ಎಂ.ನಾರಾಯಣ ಸ್ವಾಮಿ, ಮೈಸೂರು-ಧರ್ಮಸೇನಾ, ಶಿವಮೊಗ್ಗ-ಪ್ರಸನ್ನ ಕುಮಾರ್,ಬಳ್ಳಾರಿ- ಕೆ.ಸಿ. ಕೊಂಡಯ್ಯ, ರಾಯಚೂರು-ಬಸವರಾಜ ಪಾಟೀಲ್ ಇಟಗಿ, ಬೀದರ್-ವಿಜಯ್ ಸಿಂಗ್, ಹಾಸನ-ಎಂ.ಎ.ಗೋಪಾಲ ಸ್ವಾಮಿ, ಧಾರವಾಡ-ಶ್ರೀನಿವಾಸ ಮಾನೆ, ಉತ್ತರ ಕನ್ನಡ-ಎಸ್.ಎನ್.ಘೋಟ್ನೇಕರ್, ದಕ್ಷಿಣ ಕನ್ನಡ-ಪ್ರತಾಪ್ ಚಂದ್ರಶೆಟ್ಟಿ, ಚಿತ್ರದುರ್ಗ-ರಘು ಆಚಾರ್, ಬಾಗಲ ಕೋಟೆ- ಎಸ್.ಆರ್.ಪಾಟೀಲ್.

ಬಿಜೆಪಿ: ಮಡಿಕೇರಿ-ಪ್ರಾಣೇಶ್, ಚಿಕ್ಕಮಗಳೂರು-ಸುನೀಲ್ ಸುಬ್ರಹ್ಮಣ್ಯ, ಧಾರವಾಡ-ಪ್ರದೀಪ್ ಶೆಟ್ಟರ್, ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ, ಕಲಬುರಗಿ-ಬಿ.ಜಿ.ಪಾಟೀಲ್, ಬೆಳಗಾವಿ-ಮಹಂತೇಶ್ ಕೌಜಗಿಮಠ.

ಜೆಡಿಎಸ್: ಕೋಲಾರ-ಸಿ.ಆರ್.ಮನೋಹರ್, ಮೈಸೂರು-ಸಂದೇಶ್ ನಾಗರಾಜ್, ತುಮಕೂರು-ಬೆಮೆಲ್ ಕಾಂತರಾಜ್, ಮಂಡ್ಯ-ಅಪ್ಪಾಜಿ ಗೌಡ. ಪಕ್ಷೇತರ:ವಿಜಯಪುರ-ಬಸವನಗೌಡ ಪಾಟೀಲ್ ಯತ್ನಾಳ್, ಬೆಳಗಾವಿ-ವಿವೇಕ ರಾವ್ ಪಾಟೀಲ್ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್‌ನ 13 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತದಾರರು ರಾಜ್ಯ ಸರಕಾರದ ಕಾರ್ಯವೈಖರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
-ಸಿದ್ದರಾಮಯ್ಯ

ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ನಮ್ಮ ನಿರೀಕ್ಷೆಗೆ ತಕ್ಕಂತೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
– ಯಡಿಯೂರಪ್ಪ

ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಸವಾಲು ಹಾಕಿದ್ದರು. ಅವರ ಸವಾಲಿನಲ್ಲಿ ನಾವು ಗೆದ್ದಿದ್ದೇವೆ. ಈಗ ನೋಡೋಣ ಅವರು ಏನು ಮಾಡುತ್ತಾರೋ? -ಪರಮೇಶ್ವರ್

ವಿವೇಕರಾವ್ ‘ಕೈ’ ತೆಕ್ಕೆಗೆ ?
ಬೆಳಗಾವಿ ದ್ವಿಸದಸ್ಯ ಕ್ಷೇತ್ರದಿಂದ ಅತಿ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ವಿವೇಕರಾವ್ ಪಾಟೀಲ್ ಜ.3ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

Write A Comment