ಕರ್ನಾಟಕ

ಶೇ.97ರಷ್ಟು ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತಿಲ್ಲ !

Pinterest LinkedIn Tumblr

gangrape1

ಅತ್ಯಾಚಾರ ನಿಯಂತ್ರಣ ಸಮಿತಿ ‘ಪ್ರಾಥಮಿಕ ವರದಿ’ ಸಲ್ಲಿಕೆ

ಬೆಂಗಳೂರು: ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಶೇ.97ರಷ್ಟು ಪ್ರಕರಣಗಳಲ್ಲಿ ಆರೋಪ ಸಾಬೀತಾಗದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಇದಕ್ಕೆ ರಾಜ್ಯದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮೂಲ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕುರಿತ ತಜ್ಞರ ಸಮಿತಿಯ ವರದಿಯು ಬಹಿರಂಗಪಡಿಸಿದೆ.

ವಿ.ಎಸ್. ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಕುರಿತ ಸಮಿತಿಯು ಬುಧವಾರ ವಿಧಾನಸೌಧದಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತನ್ನ ‘ಪ್ರಾಥಮಿಕ ವರದಿ’ಯನ್ನು ಸಲ್ಲಿಸಿತು. ಆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಹಾಗೂ ಕಾನೂನು ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಸಮಿತಿಯು 9ಜಿಲ್ಲೆಗಳಲ್ಲಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದು, ಹತ್ತು ಪ್ರಕರಣಗಳ ಬಗ್ಗೆ ಪ್ರತ್ಯೇಕವಾಗಿ ರಾಜ್ಯ ಸರಕಾರಕ್ಕೆ ಹಲವು ಶಿಾರಸುಗಳನ್ನು ಮಾಡಿದೆ ಎಂದ ಉಗ್ರಪ್ಪ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಟ್ಟು 18 ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

4.5 ಲಕ್ಷ ರೂ. ಪರಿಹಾರ: ಅತ್ಯಾಚಾರ ಸಂತ್ರಸ್ತೆಗೆ 25ಸಾವಿರ ರೂ. ಪರಿಹಾರ ಧನವನ್ನು ತಕ್ಷಣ ನೀಡಬೇಕು. ಅಲ್ಲದೆ, ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಗೆ 4.5ಲಕ್ಷ ರೂ., ಪ್ರಾಪ್ತೆ ಆಗಿದ್ದರೆ 3ಲಕ್ಷ ರೂ.ಪರಿಹಾರವನ್ನು ಯಾವುದೇ ವಿಳಂಬ ಅನುಸರಿಸದೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ಶಾಲಾ-ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಸಂತ್ರಸ್ತೆಗೆ ಕಾನೂನುಬಾಹಿರವಾಗಿ ನಡೆಸುತ್ತಿರುವ ಎರಡು ಬೆರಳುಗಳ ಚಿಕಿತ್ಸೆ (ಠಿಡಿಟ ್ಛಜ್ಞಿಜಛ್ಟಿ ಠಿಛಿಠಿ) ನಡೆಸಬಾರದು. ಪೂರ್ವಾಪರ ಮಾಹಿತಿ ಇಲ್ಲದೆ ಬೋಧಕ, ಬೋಧಕೇತರ, ಭದ್ರತಾ ಸಿಬ್ಬಂದಿ ಮತ್ತು ಚಾಲಕರು ಹಾಗೂ ಆಸ್ಪತ್ರೆಗಳಲ್ಲಿ ಶುಶ್ರೂಷಕ(ಪುರುಷ) ಸಿಬ್ಬಂದಿಯನ್ನು ನೇಮಿಸಿಕೊಳ್ಳಬಾರದು.

ಹೊಸ ಸಮಿತಿ ರಚಿಸಿ: ಸಂತ್ರಸ್ತೆಗೆ ತ್ವರಿತವಾಗಿ ಪರಿಹಾರ ನೀಡಲು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ಸೇವಾ ಪ್ರಾಧಿಕಾರದ ಬದಲಿಗೆ ಡಿಸಿ, ಎಸ್ಪಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಉಪ ನಿರ್ದೇಶಕರನ್ನು ಒಳಗೊಂಡ ಹೊಸ ಸಮಿತಿಯನ್ನು ರಚಿಸಲು ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕು.

ಅಂತಿಮ ವರದಿ ನೀಡಲು ಇನ್ನೂ ಆರು ತಿಂಗಳು ಅವಧಿ ವಿಸ್ತರಿಸಲು ಕೋರಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ: ಉಗ್ರಪ್ಪ
ಹೊಸನಗರದ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧದ 2 ಅತ್ಯಾಚಾರ ಆರೋಪ ಪ್ರಕರಣಗಳ ಸಂಬಂಧ ದೂರುಗಳು ಬಂದಿವೆ. ಪ್ರಕರಣದ ಪರಿಶೀಲನೆ, ಸ್ವಾಮಿಗೆ ನೋಟಿಸ್ ನೀಡಿ ವಿಚಾರಣೆ ಬಳಿಕ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ.
ವಿ.ಎಸ್.ಉಗ್ರಪ್ಪ, ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ

ವರದಿಯ ಮುಖ್ಯಾಂಶಗಳು
ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಗೆ 4.5 ಲಕ್ಷ, ಪ್ರಾಪ್ತ ವಯಸ್ಕಳಾಗಿದ್ದರೆ 3 ಲಕ್ಷ ರೂ.ಪರಿಹಾರ, ಜನನಿಬಿಡ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಸಂತ್ರಸ್ತೆಗೆ ಕಾನೂನುಬಾಹಿರ ಎರಡು ಬೆರಳುಗಳ ಪರೀಕ್ಷೆ ನಡೆಸಬಾರದು, ಪೂರ್ವಾಪರ ಮಾಹಿತಿ ಇಲ್ಲದೆ ಸಿಬ್ಬಂದಿ ನೇಮಿಸಿಕೊಳ್ಳಬಾರದು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಸ್ ಸೌಲಭ್ಯ ದ್ವಿಗುಣಗೊಳಿಸಬೇಕು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕು, ಸಂತ್ರಸ್ತೆಗೆ ತ್ವರಿತವಾಗಿ ಪರಿಹಾರ ನೀಡಲು ಹೊಸ ಸಮಿತಿ ರಚಿಸಿ ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕು.

Write A Comment