
ಮಂಗಳೂರು,ಡಿ.28: ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಫ್ “ಸಿ” ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘ ಇದರ 23 ನೇ ಕರ್ನಾಟಕ ವಲಯ ಜಂಟಿ ಸಮ್ಮೇಳನವು ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲಾ ಆವರಣದಲ್ಲಿ ಆರಂಭಗೊಂಡಿದ್ದು ಮೂರು ದಿನಗಳವರೆಗೆ ಈ ಸಮ್ಮೇಳನ ನಡೆಯಲಿದೆ.
ಸಮ್ಮೇಳನವನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಡಿಸ್ ಅವರು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಸಾರ್ವಜನಿಕ ಸೇವೆ ನೀಡುವ ಇಲಾಖೆಗಳಲ್ಲಿ ಅಂಚೆ ಇಲಾಖೆಯೂ ಒಂದು ಎಂದು ಶ್ಲಾಘಿಸಿ, ವೈಯುಕ್ತಿಕವಾಗಿ ನನಗೆ ಅಂಚೆ ನೌಕರರ ಮೇಲೆ ವಿಶೇಷ ಗೌರವವಿದೆ. ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಅಂಚೆ ನೌಕರರು ಸರ್ಕಾರದ ಮೇಲೆ ಒತ್ತಡ ಹೇರುವುದಿಲ್ಲ. ಅವರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿದ್ದಾರೆ ಎಂದರು.

ಅಂಚೆ ನೌಕರರ ಸಂಘದ ಅಧ್ಯಕ್ಷ ಸಿ. ಆರ್. ದೀನಬಂದು ಅಧ್ಯಕ್ಷತೆ ವಹಿಸಿದ್ದರು.ವಿಧಾನ ಸಭಾ ಸದಸ್ಯ ಮತ್ತು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿ.ಎ. ಮೊಹಿಯುದ್ದೀನ್ ಬಾವ, ಸಮಿತಿಯ ಕಾರ್ಯದರ್ಶಿ ಕೆ.ನಾಗೇಶ್, ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯ ಕರೆಸ್ಪಾಂಡೆಂಟ್ ರೆ. ಫಾ. ಎರಿಕ್ ಮಥಾಯಸ್, ಕಾಂಗ್ರೆಸ್ ನಾಯಕ ಎಂ. ಎ. ಗಫೂರ್, ಅಂಚೆ ನೌಕರರ ಸಂಘಟನೆ ನಾಯಕರಾದ ತ್ಯಾಗರಾಜನ್, ಡಿ. ಕಿಶನ್ ರಾವ್, ಎಂ. ಎ. ಚಿತ್ರಸೇನಾ, ಕರ್ನಾಟಕ ವೃತ್ತ ಚೀಫ್ ಪೋಸ್ಟ್ ಮಾಸ್ಟರ್ ಶ್ರೀಮತಿ ಉಷಾ ಚಂದ್ರಶೇಖರ್, ಹಿರಿಯ ಅಂಚೆ ಅಧೀಕ್ಷಕ ಎಂ. ಜಗದೀಶ್ ಪೈ ಮೊದಲಾದವರು ಉಪಸ್ಥಿತರಿದ್ದರು.