ಅಂತರಾಷ್ಟ್ರೀಯ

ಪಾಕ್‌ಗೆ ದಿಢೀರ್ ಭೇಟಿ ನೀಡಿದ ಮೋದಿ; ಶಿಷ್ಟಾಚಾರ ಬದಿಗಿರಿಸಿ ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ಸ್ವಾಗತಿಸಿದ ನವಾಜ್ ಶರೀಫ್

Pinterest LinkedIn Tumblr

modi1

ಲಾಹೋರ್, ಡಿ.26: ಶುಕ್ರವಾರ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿಯನ್ನು ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಖುದ್ದಾಗಿ ಸ್ವಾಗತಿಸಿದರು. ಇದರೊಂದಿಗೆ ಮೋದಿ ಕಳೆದ ಹತ್ತು ವರ್ಷ ಗಳಿಗೂ ಹೆಚ್ಚಿನ ಅವಧಿಯಲ್ಲಿ ಪಾಕ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಷ್ಯಕ್ಕೆ ಎರಡು ದಿನಗಳ ಪ್ರವಾಸದ ಬಳಿಕ ಗುರುವಾರ ಅಲ್ಲಿಂದ ನಿರ್ಗಮಿಸಿ, ಶುಕ್ರವಾರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ಸ್ವದೇಶಕ್ಕೆ ಮರಳುವ ದಾರಿಯಲ್ಲಿ ಅನಿರೀಕ್ಷಿತ ನಡೆಯೊಂದರಲ್ಲಿ ಇಲ್ಲಿಯ ಅಲ್ಲಾಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ಶರೀಫ್ ಬರಸೆಳೆದು ಸ್ವಾಗತಿಸಿದರು.

modi12

ಸ್ಥಳೀಯ ಕಾಲಮಾನ ಸಂಜೆ 4:20ಕ್ಕೆ ಲಾಹೋರದಲ್ಲಿಳಿದ ಪ್ರಧಾನಿಯವರ ವಿಶೇಷ ಐಎಎಫ್ ಬೋಯಿಂಗ್ 737 ವಿಮಾನದಿಂದ ಹೊರಗೆ ಆಗಮಿಸಿದ ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತ ಕಾದಿತ್ತು. ಬಳಿಕ ಉಭಯ ನಾಯಕರು ಹೆಲಿಕಾಪ್ಟರ್‌ನಲ್ಲಿ ಲಾಹೋರ್‌ನ ಹೊರವಲಯದಲ್ಲಿರುವ ಶರೀಫ್ ಅವರ ರಾಯವಿಂದ್‌ನ ಅರಮನೆಸದೃಶ ನಿವಾಸಕ್ಕೆ ತೆರಳಿದರು.

ಇಂದು ಮಧ್ಯಾಹ್ನ ಲಾಹೋರ್‌ನಲ್ಲಿ ಪ್ರಧಾನಿ ನವಾಝ್ ಶರೀಫ್ ಅವರ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಫ್ಘಾನಿಸ್ತಾನ ಭೇಟಿಯ ಅಂತ್ಯದಲ್ಲಿ ಮೋದಿ ಟ್ವೀಟ್ ಮಾಡಿದ್ದರು.

ಶರೀಫ್‌ರನ್ನು ಭೇಟಿಯಾಗಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ತಿಳಿಸಿದ್ದರು. ಶರೀಫ್ ಶುಕ್ರವಾರ 66ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಎರಡು ವಾರಗಳ ಹಿಂದೆ ಪ್ಯಾರಿಸ್‌ನಲ್ಲಿ ಹವಾಮಾನ ಬದಲಾವಣೆ ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಅನೌಪಚಾರಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಶುಕ್ರವಾರ ಉಭಯ ನಾಯಕರು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಹದಗೆಡಿಸಿರುವ ಪ್ರಮುಖ ವಿವಾದಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

ಬಿಗಿ ಭದ್ರತೆ
ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಪಾಕ್ ಅಧಿಕಾರಿಗಳು ಲಾಹೋರ್‌ನಲ್ಲಿ,ವಿಶೇಷವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಶರೀಫ್ ಅವರು ಇಂದು ತನ್ನ ರಾಯವಿಂದ್ ನಿವಾಸದಲ್ಲಿ ನಡೆದ ಮೊಮ್ಮಗಳು ಮೆಹರುನ್ನೀಸಾಳ ಮದುವೆಗೆ ಮೋದಿಯವರನ್ನು ಆಹ್ವಾನಿಸಿದ್ದರು ಎಂದು ಪಿಎಂಲ್-ಎನ್ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.

ನರೇಂದ್ರ ಮೋದಿಯವರಿಗೆ ಪಾಕಿಸ್ತಾನಕ್ಕೆ ಸುಸ್ವಾಗತ.ಬಾಕಿಯಿರುವ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ನಿರಂತರ ಮಾತುಕತೆಯೊಂದೇ ಮಾರ್ಗ ಎಂದು ಪ್ರತಿಪಕ್ಷ ಪಿಪಿಪಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿ ಟ್ವೀಟಿಸಿದ್ದಾರೆ.

‘ಧೈರ್ಯದ’ ಹೆಜ್ಜೆ: ಸುಧೀಂದ್ರ
ಮುಂಬೈ: ಶುಕ್ರವಾರ ಲಾಹೋರ್‌ಗೆ ತನ್ನ ದಿಢೀರ್ ಭೇಟಿಯ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಧೈರ್ಯದ ಹೆಜ್ಜೆಯನ್ನಿರಿಸಿದ್ದಾರೆ. ಇದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಅಬ್ಸರ್ವರ್ ರೀಸರ್ಚ್ ಫೌಂಡೇಷನ್‌ನ ಅಧ್ಯಕ್ಷ ಸುಧೀಂದ್ರ ಕುಲಕರ್ಣಿ ಅವರು ಇಂದು ಇಲ್ಲಿ ಹೇಳಿದರು. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯಲ್ಲಿ ಇದೊಂದು ಅತ್ಯಂತ ಮಹತ್ವದ ಕ್ರಮವಾಗಿದೆ ಎಂದು ಅವರು ನುಡಿದರು. ಕಳೆದ ಅಕ್ಟೋಬರ್‌ನಲ್ಲಿ ಮುಂಬೈಯಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮುಹಮ್ಮದ್ ಕಸೂರಿಯವರ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಶಿವಸೇನೆಯ ಕಾರ್ಯಕರ್ತರು ಕುಲಕರ್ಣಿಯವರ ಮುಖಕ್ಕೆ ಮಸಿಬಳಿದಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ‘ಹಮ್ ಜಂಗ್ ನಾ ಹೋನೆ ದೇಂಗೆ (ನಾವೆಂದೂ ಯುದ್ಧ ನಡೆಯಲು ಅವಕಾಶ ನೀಡುವುದಿಲ್ಲ)’ ಕವಿತೆಯನ್ನು ಉಲ್ಲೇಖಿಸಿದ ಅವರು, ತನ್ನ ಹುಟ್ಟುಹಬ್ಬದ ದಿನವೇ ಮೋದಿಯವರ ಪಾಕ್ ಭೇಟಿ ಅಟಲ್‌ಜಿಯವರಿಗೆ ತುಂಬ ಸಂತಸವನ್ನುಂಟು ಮಾಡಿರಬೇಕು ಎಂದರು. ಅಟಲ್‌ಜಿ ಹುಟ್ಟುಹಬ್ಬದಂದು ಮೋದಿ ಲಾಹೋರಿಗೆ ತೆರಳಿ ಶರೀಫ್ ಅವರನ್ನು ಭೇಟಿಯಾಗಿರುವುದು ಹಿತವಾದ ಅಚ್ಚರಿಯಾಗಿದೆ ಎಂದು ಹೇಳಿದರು.

ಇಂದು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಜನ್ಮದಿನವೂ ಹೌದು. ಭಾರತ ಮತ್ತು ಪಾಕಿಸ್ತಾನ ಶಾಂತಿಯಿಂದ ಬಾಳಬೇಕು ಎಂದು ಅವರು ಬಯಸಿದ್ದರು ಎಂದು ಕುಲಕರ್ಣಿ ಹೇಳಿದರು.

ಇದು ಮೋದಿಯವರ ಮುತ್ಸದ್ದಿತನದ ನಡೆಯಾಗಿದೆ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಇಂತಹ ಸಂಬಂಧಗಳನ್ನಿರಿಸಿಕೊಳ್ಳಬೇಕು.
-ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವೆ

Write A Comment