ಮುರಾದಾಬಾದ್: ವಿದ್ಯುತ್ ವಿತರಣಾ ಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮುರಾದಾಬಾದ್ ನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ.
ಮುರದಾಬಾದ್ ನಲ್ಲಿ ಹಿಟ್ಟಿನ ಗಿರಣಿಯನ್ನು ನಡೆಸುತ್ತಿರುವ ಪರಾಗ್ ಅವರಿಗೆ 2032 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ಇದನ್ನು ಪ್ರಶ್ನಿಸಿ ವಿದ್ಯುತ್ ಪ್ರಸರಣ ಇಲಾಖೆಗೆ ಸುತ್ತುತ್ತಿದ್ದಾರೆ ಆದರೂ ಸಹ ಈ ವರೆಗೂ ಪರಾಗ್ ಅವರಿಗೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆ ಅಧಿಕಾರಿಗಳು, ಆನ್ ಲೈನ್ ಬಿಲ್ ತಯಾರಿಕೆ ವೇಳೆ ಉಂಟಾದ ತಾಂತ್ರಿಕ ದೋಷದಿಂದ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು ಹರಿಯಾಣದ ಫರೀದಾಬಾದ್ನಲ್ಲಿ ವಾಹನಗಳ ಟೈರ್ ದುರಸ್ತಿ ಮಾಡುವ ಸಣ್ಣ ಅಂಗಡಿ ಮಾಲೀಕನಿಗೆ ಬರೋಬ್ಬರಿ ₹77 ಕೋಟಿ ತಿಂಗಳ ವಿದ್ಯುತ್ ಬಿಲ್ ನ್ನು ನೀದಲಾಗಿತ್ತು. ಈ ಮೊತ್ತದ ವಿದ್ಯುತ್ ಬಿಲ್ ನೋಡಿ ಅವರು ಗಾಬರಿಗೊಂಡಿದ್ದರು.