ನವದೆಹಲಿ, ಡಿ.25- ಸರಿಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡು ಅಜಾತಶತ್ರುವೆಂದೇ ಎಲ್ಲರಿಂದಲೂ ಕರೆಸಿಕೊಳ್ಳುವ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಇಂದು 91ನೆ ಹುಟ್ಟುಹಬ್ಬದ ಸಂಭ್ರಮ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾದ ಅಜಾತಶತ್ರುಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನ್‌ಮೋಹನ್‌ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಜ್‌ನಾಥ್‌ಸಿಂಗ್, ಸುಷ್ಮಾಸ್ವರಾಜ್, ಅರುಣ್‌ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್‌ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ,
ಮುಖ್ಯಮಂತ್ರಿಗಳಾದ ವಸುಂಧರಾರಾಜೇ, ಶಿವರಾಜ್‌ಸಿಂಗ್ ಚೌಹಾಣ್, ದೇವೇಂದ್ರ ಫಡ್ನಾವೀಸ್, ಡಾ.ರಮಣಸಿಂಗ್ ಸೇರಿದಂತೆ ಅನೇಕ ಗಣ್ಯರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನವದೆಹಲಿಯಲ್ಲಿರುವ ವಾಜಪೇಯಿ ಅವರ ನಿವಾಸಕ್ಕೆ ಬೆಳಗಿನಿಂದಲೇ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಗಣ್ಯರು ಹೂಗುಚ್ಛ ನೀಡಿ ಶುಭ ಕೋರಿದರು. ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಈ ಮಹಾನ್ ನಾಯಕನಿಗೆ ಟ್ವೀಟ್ ಮೂಲಕ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ.
ವಾಜಪೇಯಿ ಅವರು ದೇಶ ಕಂಡ ಅಪರೂಪದ ಪ್ರಧಾನಿ. ಅವರ ಆಡಳಿತಾವಧಿ ಭಾರತದಲ್ಲಿ ಹೊಸ ಸುವರ್ಣಯುಗವನ್ನೇ ಪ್ರಾರಂಭಿಸಿತ್ತು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರಾರಂಭಿಸುವ ಮೂಲಕ ಸಂಪರ್ಕ ಕ್ರಾಂತಿಯನ್ನೇ ಮಾಡಿದ ಮಹಾನ್ ನಾಯಕ ಎಂದು ಮೋದಿ ಕೊಂಡಾಡಿದ್ದಾರೆ. ಬಿಜೆಪಿಯನ್ನು ಕಟ್ಟಿ, ಬೆಳೆಸಿದ ಅಗ್ರ ನಾಯಕರಲ್ಲಿ ವಾಜಪೇಯಿ ಮೊದಲಿಗರು. ಅವರ ಸಲಹೆ, ಮಾರ್ಗದರ್ಶನ ನನ್ನಿಂದ ಹಿಡಿದು ದೇಶದ ಪ್ರತಿಯೊಬ್ಬರಿಗೂ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ರೈಲು ಸಂಚಾರ ಆರಂಭ:
ವಾಜಪೇಯಿ ಅವರ 91ನೆ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಯೊಂದನ್ನು ನೀಡಿದೆ. ವಾಜಪೇಯಿ ಅವರ ಹುಟ್ಟಿದ ಮಧ್ಯಪ್ರದೇಶದ ಈತ್ವಾ ಜಿಲ್ಲೆಯ ಬತೇಶ್ವರ್‌ನಲ್ಲಿ ಇಂದು ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ಈ ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ತಮ್ಮ ಗ್ರಾಮವಾದ ಬತೇಶ್ವರ್‌ನಿಂದ ಈತ್ವಾಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ 16 ವರ್ಷಗಳ ಹಿಂದೆ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದರು.ಇಂದು ಕೇಂದ್ರ ರೈಲ್ವೆ ಸಚಿವ ಮನೋಜ್ ಸಿನ್ಹಾ, ರಾಮ್‌ಶಂಕರ್ ಕಠಾರಿಯಾ ಮತ್ತಿತರರು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.