ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ತಾಗಿಕೊಂಡೇ ಇರುವ ಉತ್ತರಪ್ರದೇಶದ ನೋಯ್ಡಾ ಹಾಗೂ ತಾಜ್ ಮಹಲ್ ನಗರಿ ಆಗ್ರಾ ನಡುವೆ ಸಂಪರ್ಕ ಕಲ್ಪಿಸುವ ಆರು ಪಥಗಳ 165 ಕಿ.ಮೀ. ಉದ್ದದ “ಯುಮನಾ ಎಕ್ಸ್ಪ್ರೆಸ್’ ಹೆದ್ದಾರಿ ಮಾರಾಟಕ್ಕಿದೆ.
60 ಸಾವಿರ ಕೋಟಿ ರೂ. ಸಾಲದ ಹೊರೆ ಹೊತ್ತಿರುವ ಜೇಪಿ ಗ್ರೂಪ್ ತಾನು ಅಭಿವೃದ್ಧಿಪಡಿಸಿದ ಈ ಹೆದ್ದಾರಿಯನ್ನು ಮಾರಾಟ ಮಾಡಲು ಮುಂದಾಗಿದೆ. ಈ ಹೆದ್ದಾರಿ 13 ಸಾವಿರ ಕೋಟಿ ರೂ. ಮೌಲ್ಯ ಹೊಂದಿರಬಹುದು ಎಂಬ ಅಂದಾಜಿದೆ. 2012ರಿಂದ ಕಾರ್ಯಾರಂಭ ಮಾಡಿ ರುವ ಯಮುನಾ ಎಕ್ಸ್ಪ್ರೆಸ್ ವೇಯಿಂದ ವಾರ್ಷಿಕ 1000 ಕೋಟಿ ರೂ. ಸುಂಕ ವಸೂಲಾಗಬಹುದು ಎಂದು
ಕಂಪನಿ ಅಂದಾಜಿಸಿತ್ತು.
ಆದರೆ 200 ಕೋಟಿ ರೂ. ಕೂಡ ಸಂಗ್ರಹವಾಗುತ್ತಿಲ್ಲ ಎಂದು ವಾಣಿಜ್ಯ ದೈನಿಕ ವೊಂದು ವರದಿ ಮಾಡಿದೆ. ದೆಹಲಿ- ಆಗ್ರಾ
ನಡುವಣ ಪ್ರಯಾಣ ಅವಧಿ ಕಡಿಮೆ ಮಾಡುವ ಉದ್ದೇಶದೊಂದಿಗೆ ನಿರ್ಮಿಸಲಾಗಿದ್ದ ಈ ಹೆದ್ದಾರಿ ಹೆಚ್ಚು ಅಪಘಾತಗಳ ಕಾರಣದಿಂದ ಅಪಾಯಕಾರಿ ರಸ್ತೆ ಎಂದು ಕುಖ್ಯಾತಿಗೀಡಾಗಿದೆ. 2014ರಲ್ಲಿ 771, ಈ ವರ್ಷ ಜುಲೈ ಮಧ್ಯಭಾಗದವರೆಗೆ 319 ಮಂದಿ ಈ
ರಸ್ತೆಯಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ.
-ಉದಯವಾಣಿ