ಬೀಜಿಂಗ್: ಚೀನಾದಲ್ಲಿ ಮೊದಲ ಬಾರಿಗೆ ಎಂಬಂತೆ ಚೀನಾದ ನ್ಯೂಸ್ ಚಾನೆಲ್ ವೊಂದು ರೋಬೋಟ್ ವೊಂದನ್ನು ಬೆಳಗಿನ ಬ್ರೇಕ್ ಫಾಸ್ಟ್ ಶೋನಲ್ಲಿನ ಹವಾಮಾನ ವರದಿಗಾಗಿ ನೇಮಿಸಿದೆ! ಆದರೆ ನಿಜಕ್ಕೂ ಚಿಂತೆಗೀಡಾದವರು ಯಾರೆಂದರೆ ಚೀನಾದಲ್ಲಿನ ಪತ್ರಕರ್ತರು….ಇನ್ಮುಂದೆ ತಮ್ಮ ಕೆಲಸಕ್ಕೂ ಸಂಚಕಾರ ಬಂತು ಎಂದು ಗೊಣಗುತ್ತಿದ್ದಾರಂತೆ!
ಚೀನಾದ ಟಿವಿ ಚಾನೆಲ್ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೋಬೋಟ್ ಅನ್ನು ಉದ್ಯೋಗಿಯನ್ನಾಗಿ ನೇಮಕ ಮಾಡಿಕೊಂಡಿದೆ. ನನ್ನ ಹೊಸ ಕೆಲಸದ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ರೋಬೋಟ್ ಕ್ಸಿಯಾವೋ ಐಸ್ ಹೇಳಿದೆ.
ಸ್ಮಾರ್ಟ್ ಕ್ಲೌಡ್ ಮತ್ತು ಬಿಗ್ ಡೇಟಾ ತಂತ್ರಜ್ಞಾನ ಆಧರಿಸಿ ಮೈಕ್ರೋಸಾಫ್ಟ್ ಈ ಕ್ಸಿಯಾವೋ ಐಸ್ ರೊಬೋಟ್ ಅನ್ನು ತಯಾರಿಸಿದೆ. ಈಗಾಗಲೇ 2 ದಿನಗಳ ಕಾಲ ಕರ್ತವ್ಯ ನಿರ್ವಹಿಸಿರುವ ರೋಬೋಟ್ ತನ್ನ ವಿಶಿಷ್ಟ ಧ್ವನಿಯಿಂದ ವೀಕ್ಷಕರನ್ನು ಸೆಳೆದಿದೆ.
ರೋಬೋಟ್ ಕೆಲಸ ಮತ್ತು ಧ್ವನಿ ಯಶಸ್ವಿಯಾಗುತ್ತಿರುವ ಸುಳಿವು ಸಿಗುತ್ತಿರುವಂತೆಯೇ ಸಾಂಪ್ರದಾಯಿಕ ಟಿವಿ ಆಂಕರ್ ಗಳಿಗೆ ಮತ್ತು ಹವಾಮಾನ ವರದಿ ಮಾಡುವ ಪತ್ರಕರ್ತರಿಗೆ ದೊಡ್ಡ ಚಿಂತೆ ಶುರುವಾಗಿದೆಯಂತೆ.
ಏತನ್ಮಧ್ಯೆ ಶಾಂಘೈ ಮೀಡಿಯಾ ಗ್ರೂಫ್, ಟಿವಿ ನ್ಯೂಸ್ ನ ನಿರ್ದೇಶಕ ಸಾಂಗ್ ಜಿಯಾಂಗ್ ಮಿಂಗ್, ಕ್ಸಿಯಾವೋ ಐಸ್ ರೋಬೋಟ್ ನಿಂದ ಆಂಕರ್ ಗಳನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಆಗಲ್ಲ. ಆದರೆ ಹವಾಮಾನ ವರದಿಗಾರರು ಮತ್ತು ಪತ್ರಕರ್ತರಿಗೆ ಬದಲಿಯಾಗಿ ಉಪಯೋಗಿಸಲು ಈ ರೋಬೋಟ್ ಹೆಚ್ಚು ಸಶಕ್ತವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
-ಉದಯವಾಣಿ