ಕನ್ನಡ ವಾರ್ತೆಗಳು

ಗೊಂದಲವಿಲ್ಲದೆ ಮತದಾನ ಪ್ರಕ್ರಿಯೆ: ಸಿಬ್ಬಂದಿಗಳಿಗೆ ಡಿಸಿ ಸೂಚನೆ

Pinterest LinkedIn Tumblr

Dc_election_,atter

ಮ೦ಗಳೂರು,ಡಿ.21:  ದಕ್ಷಿಣ ಕನ್ನಡ ವಿಧಾನಪರಿಷತ್ ಕ್ಷೇತ್ರಕ್ಕೆ ಡಿಸೆಂಬರ್ 27ರಂದು ನಡೆಯುವ ಚುನಾವಣಾ ಪ್ರಕ್ರಿಯೆಗಳನ್ನು ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲದೇ, ಮುಕ್ತ ಮತ್ತು ಪಾರದರ್ಶಕವಾಗಿ ನಡೆಸುವಂತೆ ಮತಗಟ್ಟೆ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.ಅವರು ಸೋಮವಾರ ಪುರಭವನದಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯ ಉದ್ಘಾಟಿಸಿ ಮಾತನಾಡಿದರು.

ವಿಧಾನಪರಿಷತ್ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಗಳನ್ನು ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಇತರೆ ಚುನಾವಣೆಗಳಲ್ಲಿ ಇದು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಮಾತ್ರ ಸೀಮಿತವಾಗಿತ್ತು. ಈ ನಿಟ್ಟಿನಲ್ಲಿ ಮತಗಟ್ಟೆಯೊಳಗೆ ಯಾವುದೇ ರೀತಿಯ ಗೊಂದಲವಿಲ್ಲದೇ, ಮತದಾನ ನಡೆಸುವ ಹೊಣೆ ಮತಗಟ್ಟೆ ಅಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದರು.

ಮತದಾರರು ಕಡಿಮೆ ಇದ್ದರೂ, ಪ್ರತಿಯೊಬ್ಬ ಮತದಾರರು ಜನಪ್ರತಿನಿಧಿಗಳಾಗಿರುವುದರಿಂದ ಪ್ರತಿಯೊಂದು ಮತದಾನಕ್ಕೆ ಹೆಚ್ಚಿನ ಮಹತ್ವ ಇದೆ. ಮತದಾರರು ಒಂದಲ್ಲೊಂದು ರಾಜಕೀಯ ಪಕ್ಷಗಳಿಗೆ ಸೇರಿದವರಾಗಿರುತ್ತಾರೆ. ಈ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಚುನಾವಣೆ ಇವಿ‌ಎಂ ಮೂಲಕ ನಡೆಯದೆ, ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಮೂಲಕ ನಡೆಯಲಿದೆ. ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ಚುನಾವಣೆ ನಡೆಯಲಿದ್ದು, ಎಲ್ಲ ಮತದಾರರು ಮತ ಚಲಾಯಿಸಿದರೂ, ಸಂಜೆ ೪ರವರೆಗೆ ಮತಗಟ್ಟೆ ಕಾರ್ಯನಿರತವಾಗಿರಬೇಕು. ಮತಗಟ್ಟೆಯಲ್ಲಿ ನೀಡಲಾಗುವ ಪೆನ್ ಮೂಲಕವೇ ಮತದಾನ ಆಗಬೇಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಇರುವುದಿಲ್ಲ. ಜಿಲ್ಲೆಯಲ್ಲಿ ೪ ಅನಕ್ಷರಸ್ತ ಮತದಾರರಿದ್ದು, ಇವರಿಗೆ ಸಹಾಯಕರನ್ನು ಬಳಸಲು ಅನುಮತಿ ನೀಡಲಾಗಿದೆ. ಮತದಾನ ಪ್ರಕ್ರಿಯೆಯನ್ನು ನಿಯಮಾನುಸಾರ ಕಟ್ಟುನಿಟ್ಟಾಗಿ ನಡೆಸುವಂತೆ ಎ.ಬಿ. ಇಬ್ರಾಹಿಂ ತಿಳಿಸಿದರು.

ಚುನಾವಣಾ ತರಬೇತಿ ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಹಿಂದೆ ಎಷ್ಷೇ ಚುನಾವಣೆ ನಡೆಸಿದ ಅನುಭವ ಇದ್ದರೂ, ಕಾಲಕಾಲಕ್ಕೆ ಚುನಾವಣಾ ನಿಯಮಗಳು ಬದಲಾಗುವುದರಿಂದ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ಅಗತ್ಯವಾಗಿದೆ ಎಂದರು.

ಚುನಾವಣಾ ಕರ್ತವ್ಯದಲ್ಲಿ ಯಾವುದೇ ಲೋಪವನ್ನು ಸಹಿಸಲಾಗದು ಎಂದರು. 25 ಮತದಾರರಿರುವಲ್ಲಿ 2 ಹಾಗೂ 25ಕ್ಕಿಂತ ಹೆಚ್ಚಿನ ಮತದಾರರಿರುವಲ್ಲಿ 3 ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಧಾನಪರಿಷತ್ ಚುನಾವಣಾ ವೀಕ್ಷಕ, ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿ ಅದೋಣಿ ಸಯ್ಯದ್ ಸಲೀಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment