
ಮುಂಬೈ: ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿನ ವೈಫಲ್ಯದಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಎಂ.ಎಸ್. ಧೋನಿಯನ್ನು ಸೀಮಿತ ಓವರ್‍ಗಳ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಕೂಗಿಗೆ ಓಗೊಡದ ಭಾರತ ತಂಡದ ಆಯ್ಕೆಸಮಿತಿ ಮುಂದಿನ ಐಸಿಸಿ ವಿಶ್ವಕಪ್ ಪಂದ್ಯಾವಳಿಯವರೆಗೂ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆ ತರದಿರಲು ತೀರ್ಮನಿಸಿದೆ.
2014ರ ವಿಶ್ವ ಕಪ್ ಟಿ20 ಫೈನಲ್ ನಂತರ ರಾಷ್ಟ್ರೀಯ ತಂಡದ ಪರ ಯುವಿ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ . ಅಂತೆಯೇ ಎಡಗೈ ವೇಗಿ ಆಶೀಶ್ ನೆಹ್ರಾ ಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು 2011ರಲ್ಲಿ. ಈ ಇಬ್ಬರ ಸೇರ್ಪಡೆ ಅಚ್ಚರಿ ತರಿಸಿದೆ. ಬಹುಶಃ ಮುಂದಿನ ಐಸಿಸಿ ವಿಶ್ವಕಪ್ ಟಿ20 ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಯ್ಕೆಸಮಿತಿ ಇಂಥದ್ದೊಂದು ನಿರ್ಣಯ ತಳೆದಿರುವ ಸಾಧ್ಯತೆಗಳಿವೆ. ಶನಿವಾರ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆಸಮಿತಿ ಮುಂಬರಲಿರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು, ಧೋನಿ ನಾಯಕತ್ವದಲ್ಲಿ ಯಾವುದೇ ಬದಲಿಲ್ಲ ಎಂದಿರುವುದಲ್ಲದೆ, ತವರಿನಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‍ವರೆಗೂ ಅವರೇ ಸಾರಥಿಯಾಗಿರಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.
ಅಂದಹಾಗೆ ಏಕದಿನ ತಂಡದಿಂದ ಎಡಗೈ ಆಟಗಾರ ಸುರೇಶ್ ರೈನಾ ಅವರನ್ನು ಕೈಬಿಟ್ಟಿರುವ ಆಯ್ಕೆಸಮಿತಿ, 23 ವರ್ಷದ ಎಡಗೈ ವೇಗಿ, ಪಂಜಾಬ್ ಮೂಲದ ಬ್ರೈಂಡರ್ ಸ್ರನ್‍ಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿದೆ. ಇತ್ತ ನಿರೀಕ್ಷೆಯಂತೆಯೇ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿದ್ದರೆ, ಮಧ್ಯಮ ವೇಗಿ ಮೊಹಮದ್ ಶಮಿ ತಂಡಕ್ಕೆ ವಾಪಸಾಗಿದ್ದಾರೆ.
ಬಿನ್ನಿಗೆ ಸಿಗದ ಜಾಗ: ರಾಷ್ಟ್ರೀಯ ತಂಡದಲ್ಲಿ ಕರ್ನಾಟಕದಿಂದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿಗೆ ಸ್ಥಾನ ಸಿಗಲಿದೆ ಎಂಬ ಮಾತು ಹುಸಿಯಾಗಿದೆ. ಕೇವಲ ಅವರಷ್ಟೇ ಅಲ್ಲದೆ, ಅಂಬಟಿ ರಾಯುಡು, ಅಮಿತ್ ಮಿಶ್ರಾ ಕೂಡಾ ಆಯ್ಕೆಸಮಿತಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ವಿಫಲವಾಗಿದ್ದಾರೆ. ಅಂದಹಾಗೆ 27 ವರ್ಷದ ಆಲ್ ರೌಂಡರ್ ರವೀಂದ್ರ ಜಡೇಜಾ ಕಳಪೆ ಫಾರ್ಮ್ ನಿಂದಾಗಿ ದ.ಆಫ್ರಿಕಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಯಿಂದ ಕೈಬಿಡಲ್ಪಟ್ಟಿದ್ದರು. ಆದರೆ, ಇದೇ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಗಳನ್ನು ಗಳಿಸಿದ್ದರು.
ಧೋನಿಗೆ ಸತ್ವಪರೀಕ್ಷೆ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಎಂ.ಎಸ್. ಧೋನಿ ಪಾಲಿಗೆ ಈ ಆಸ್ಟ್ರೇಲಿಯಾ ಸರಣಿ ಮಹತ್ವಪೂರ್ಣವೆನಿಸಿದೆ. ಈ ಸರಣಿಯಲ್ಲಿ ಅವರು ವೈಫಲ್ಯ ವನ್ನು ಮೆಟ್ಟಿನಿಲ್ಲಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಲ್ಲಿ ಕಳಪೆ ಗೆಲುವಿನ ದಾಖಲೆಯನ್ನು ಹೊಂದಿ ರುವ ಧೋನಿ ಪಾಲಿಗೆ ಈ ಆಸ್ಟ್ರೇಲಿ ಯಾ ಪ್ರವಾಸ ಕೊನೆಯ ವಿದೇಶಿ ಪ್ರವಾಸವಾದರೂ ಅಚ್ಚರಿಯಿಲ್ಲ. ಇನ್: ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ಮೊಹಮದ್ ಶಮಿ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಆಶೀಶ್ ನೆಹ್ರಾ ಔಟ್: ಎಸ್. ಅರವಿಂದ್, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಅಂಬಟಿ ರಾಯುಡು ಮತ್ತು ಮೋಹಿತ್ ಶರ್ಮ (ಗಾಯಾಳು)
ಏಕದಿನ ತಂಡ ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಎಂ.ಎಸ್. ಧೋನಿ (ನಾಯಕ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹ ಮದ್ ಶಮಿ, ಅಕ್ಷರ್ ಪಟೇಲ್, ಇಶಾಂತ್ ಶರ್ಮ, ಉಮೇಶ್ ಯಾದವ್, ಗುರುಕೀರತ್ ಸಿಂಗ್ ಮಾನ್, ರಿಶಿ ಧವನ್, ಬ್ರೈಂದರ್ ಬಾಲ್‍ಬ್ರಿಸಿಂಗ್ ಸರಣ್.
ಟಿ20 ತಂಡ ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಎಂ. ಎಸ್. ಧೋನಿ (ನಾಯಕ), ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್ ಶಮಿ, ಹರ್ಭಜನ್ ಸಿಂಗ್, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಆಶೀಶ್ ನೆಹ್ರಾ.