ಮನೋರಂಜನೆ

ದರ್ಶನ್‌ ಜತೆಗೂ ಸಿನಿಮಾ ಮಾಡ್ತೀನಿ: ಶಿವಣ್ಣ

Pinterest LinkedIn Tumblr

shivarajkumar-759

ಬೆಂಗಳೂರು: ನಾನು ಯಾವತ್ತೋ ಸುದೀಪ್‌ ಜತೆಯಲ್ಲಿ ನಟಿಸಬೇಕಿತ್ತು. ಸುದೀಪ್‌ ನಿರ್ದೇಶನದಲ್ಲೇ ಸಿನಿಮಾ ಮಾಡಬೇಕಿತ್ತು. ಆದರೆ, ಆಗಿರಲಿಲ್ಲ. ನಾವಿಬ್ಬರೂ ಪ್ರೀತಿಯಿಂದ ಇದ್ದೇವೆ. ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ. ಯಾರೋ ಏನೋ ಹೇಳುತ್ತಾರೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಒಂದು ಫ್ಯಾಮಿಲಿ ಅಂದಮೇಲೆ, ಸಣ್ಣಪುಟ್ಟ ಸಮಸ್ಯೆಗಳು ಬರೋದು ನಿಜ. ಅದೇನೆ ಇರಲಿ, ಸುದೀಪ್‌ ಮತ್ತು ನಾನು ಚೆನ್ನಾಗಿದ್ದೇವೆ. ಮುಂದೆಯೂ ಹೀಗೇ ಪ್ರೀತಿಯಿಂದ ಇರುತ್ತೇವೆ ಎಂದು ನಟ ಶಿವರಾಜಕುಮಾರ್‌ ಹೇಳಿದ್ದಾರೆ.

ಕಲಿ ಚಿತ್ರದ ಶೀರ್ಷಿಕೆ ಬಿಡುಗಡೆ ವೇಳೆ ಭಾನುವಾರ ಮಾತನಾಡಿದ ಅವರು, ಈ ಚಿತ್ರದ ಬಳಿಕ ನಾನು ಪುನೀತ್‌ ಜತೆಗೊಂದು ಚಿತ್ರ ಮಾಡುತ್ತಿದ್ದೇನೆ. ಕನ್ನಡದಲ್ಲಿ ದರ್ಶನ್‌ ಸೇರಿದಂತೆ ಎಲ್ಲಾ ನಟರ ಜತೆಯಲ್ಲೂ ಚಿತ್ರ ನಟಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸುದೀಪ್‌, ನಾನು ಶಿವರಾಜಕುಮಾರ್‌ ಅವರ ಅಭಿನಯದ ಓಂ  ಚಿತ್ರವನ್ನು 13 ಸಲ ನೋಡಿದ್ದೇನೆ. ಈಗ ಅಂತಹ ನಟರ ಜತೆಯಲ್ಲೇ ನಟಿಸುವ ಅವಕಾಶ ಸಿಕ್ಕಿದೆ. ಕನ್ನಡದಲ್ಲಿ ಮಲ್ಟಿಸ್ಟಾರ್‌ ಸಿನಿಮಾಗಳು ಬಂದರೆ, ಕನ್ನಡ ಚಿತ್ರರಂಗ ಬೆಳೆಯುತ್ತೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಈ ಚಿತ್ರ ಹಿಟ್‌ ಆಗಿಬಿಟ್ಟರೆ, ಕನ್ನಡದಲ್ಲಿ ಹೆಚ್ಚೆಚ್ಚು ಮಲ್ಟಿಸ್ಟಾರ್‌ ಚಿತ್ರಗಳು ಬರುತ್ತವೆ. ಇಲ್ಲಿ ನಮಗಿಂತ ನಿರ್ದೇಶಕ ಪ್ರೇಮ್‌ಗೆ ಹೆಚ್ಚು ಜವಾಬ್ದಾರಿ ಇದೆ. ಅವರು ಚಿತ್ರವನ್ನು ಯಶಸ್ವಿಯಾಗಿ ನಿರ್ದೇಶನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಎರಡು ಹುಲಿಗಳನ್ನೊಮ್ಮೆ ತಿರುಗಿ ನೋಡಬೇಕು:
ನಿರ್ದೇಶಕ ಪ್ರೇಮ್‌ ಮಾತನಾಡಿ, ಈ ಚಿತ್ರಕ್ಕೆ ಹೆಚ್ಚು ಚರ್ಚೆಯೇ ನಡೆದಿಲ್ಲ. ಒಮ್ಮೆ ಸುದೀಪ್‌ ಅವರ ಜತೆ ಚರ್ಚೆ ಮಾಡುವಾಗ, ಏನೋ ಡಿಫ‌ರೆಂಟ್‌ ಆಗಿ ಮಾಡಬೇಕು ಅಂದೆ. ಹೇಗೆ ಮಾಡ್ತೀರಿ ಅಂತ ಸುದೀಪ್‌ ಕೇಳಿದರು. ಆಗ ಶಿವರಾಜ್‌ಕುಮಾರ್‌ ಜತೆ ನಟಿಸುತ್ತೀರಾ ಅಂದೆ. ಆ ಮಾತಿಗೆ ಸುದೀಪ್‌ ನಾನು ರೆಡಿ ಅಂದರು. ಶಿವರಾಜ್‌ಕುಮಾರ್‌ ಬಳಿ ಹೋಗಿ ಸುದೀಪ್‌ ನಿಮ್ಮ ಜತೆ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ನೀವು ರೆಡಿನಾ ಅಂದೆ, ಅದಕ್ಕೆ ಶಿವಣ್ಣ ಕೂಡ ನಾನು ರೆಡಿ ಅಂದರು. ಕೇವಲ ಹತ್ತು ನಿಮಿಷದಲ್ಲೇ ಚರ್ಚೆಯಾದಂತಹ ಸಿನಿಮಾ ಇದು. ಎರಡು ಹುಲಿಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ. ಬೇರೆ ಭಾಷೆ ಮಂದಿ ಕೂಡ ಇತ್ತ ತಿರುಗಿ ನೋಡಬೇಕು ಅಂತಹ ಚಿತ್ರ ಕೊಡುವುದು ನನ್ನ ಉದ್ದೇಶ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಚಿವ ಅಂಬರೀಶ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಗ್ಗೇಶ್‌, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಮುನಿರತ್ನ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ನಟ ನೆನಪಿರಲಿ ಪ್ರೇಮ್‌, ಸಂಗೀತ ನಿರ್ದೇಶಕ ಗುರುಕಿರಣ್‌ ಸೇರಿದಂತೆ ಚಿತ್ರರಂಗದ ದಂಡೇ ಸೇರಿತ್ತು.

ಬಜೆಟ್‌ನಲ್ಲಿ ರಾಯಣ್ಣನ ಹಿಂದಿಕ್ಕಲಿದೆ ಕಲಿ
ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಅವರು ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ, ಜೋಗಿ ಪ್ರೇಮ್‌ ನಿರ್ದೇಶನದ ಕಲಿ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ ಬರೆಯಲಿದೆ.

ಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಿ.ಆರ್‌. ಮನೋಹರ್‌ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಬಜೆಟ್‌ ಬರೋಬ್ಬರಿ 110 ಕೋಟಿ. ಈವರೆಗೆ ಕನ್ನಡದಲ್ಲಿ ಇಷ್ಟೊಂದು ವೆಚ್ಚದ ಸಿನಿಮಾ ನಿರ್ಮಾಣವಾಗಿರಲಿಲ್ಲ.
2012ರಲ್ಲಿ ತೆರೆ ಕಂಡ ದರ್ಶನ್‌ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರ ಈವರೆಗೆ ಕನ್ನಡದ ಅತಿದೊಡ್ಡ ಬಜೆಟ್‌ನ ಸಿನಿಮಾ ಎಂಬ ಹಿರಿಮೆ ಹೊಂದಿತ್ತು. ಅದಕ್ಕೆ 30 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಅದು ಬಿಟ್ಟರೆ ಮುನಿರತ್ನ ನಿರ್ಮಾಣದ, ಉಪೇಂದ್ರ ಅಭಿನಯದ ಕಠಾರಿ ವೀರ ಸುರಸುಂದರಾಂಗಿ ಸಿನಿಮಾಕ್ಕೆ 15 ಕೋಟಿ ರೂ. ವೆಚ್ಚವಾಗಿತ್ತು.

ಮುನಿರತ್ನ ಅವರು ಕುರುಕ್ಷೇತ್ರ ಎಂಬ ಹೆಸರಿನಲ್ಲಿ ಮಲ್ಟಿಸ್ಟಾರ್‌ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಫೆಬ್ರವರಿಯಲ್ಲಿ ಸೆಟ್ಟೇರಲಿರುವ ಆ ಚಿತ್ರದಲ್ಲಿ ಉಪೇಂದ್ರ, ಅಂಬರೀಶ್‌, ರಮ್ಯಾ ನಟಿಸುವುದು ಪಕ್ಕಾ ಆಗಿದೆ. ದರ್ಶನ್‌, ಸುದೀಪ್‌ ಜತೆಗೂ ಮಾತುಕತೆ ನಡೆಯುತ್ತಿದೆ. ಆ ಚಿತ್ರ ಕೂಟ ಅದ್ಧೂರಿ ಬಜೆಟ್‌ನ ಸಿನಿಮಾವಾಗಲಿದೆ ಎಂಬ ಮಾತುಗಳಿವೆ.

ನಾಯಕಿಯರು ಯಾರು?:
ಕಲಿ ಚಿತ್ರಕ್ಕೆ ವಾರಿಯರ್‌- ರೂಲರ್‌ ಎಂಬ ಅಡಿಶೀರ್ಷಿಕೆ ಇಡಲಾಗಿದೆ. ಸಿನಿಮಾದಲ್ಲಿ ವಾರಿಯರ್‌ ಯಾರು, ರೂಲರ್‌ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಈ ಇಬ್ಬರು ಸ್ಟಾರ್‌ ನಟರಿಗೆ ಯಾರು ನಾಯಕಿಯರಾಗುತ್ತಾರೆ, ಚಿತ್ರದ ಕಥೆ ಏನು, ಎತ್ತ ಎಂಬ ಗುಟ್ಟನ್ನು ಪ್ರೇಮ್‌ ಅವರು ಬಿಟ್ಟುಕೊಟ್ಟಿಲ್ಲ.

ಕನ್ನಡದಲ್ಲಿ ಮಲ್ಟಿಸ್ಟಾರ್‌ ಸಿನಿಮಾ ಇದೇ ಮೊದಲಲ್ಲ
ಕನ್ನಡ ಚಿತ್ರರಂಗದ ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ, ಕನ್ನಡದಲ್ಲಿ ಮಲ್ಟಿಸ್ಟಾರ್‌ ಸಿನಿಮಾಗಳು ಹೊಸದೇನಲ್ಲ. ಆ ದಿನಗಳಲ್ಲೇ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌ ಅಭಿನಯದ ಗಂಧದ ಗುಡಿ ಸಿನಿಮಾ ಬಂದಿತ್ತು. ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ಅಭಿನಯದಲ್ಲಿ ಸಹೋದರರ ಸವಾಲ್‌ಚಿತ್ರ ಕೂಡ ತೆರೆಕಂಡಿತ್ತು.

ಡಾ.ರಾಜ್‌ಕುಮಾರ್‌ ಮತ್ತು ಅಂಬರೀಷ್‌ ಅಭಿನಯದ ಒಡ ಹುಟ್ಟಿದವರು ಡಾ.ರಾಜ್‌ಕುಮಾರ್‌ ಮತ್ತು ಅನಂತ್‌ನಾಗ್‌ ಅಭಿನಯದಲ್ಲಿ ಧಿಕಾಮನ ಬಿಲ್ಲು  ಚಿತ್ರ ಕೂಡ ಬಂದಿತ್ತು. ಡಾ.ರಾಜ್‌ಕುಮಾರ್‌ ಜತೆ ಶಂಕರ್‌ನಾಗ್‌ ಅವರ ಅಪೂರ್ವ ಸಂಗಮ ಚಿತ್ರ ಚಿತ್ರರಸಿಕರ ಮನಗೆದ್ದಿತ್ತು. ಅದಷ್ಟೇ ಅಲ್ಲ, ಶ್ರೀನಾಥ್‌ ಮತ್ತು ಡಾ.ರಾಜ್‌ಕುಮಾರ್‌ ಅಭಿನಯದಲ್ಲಿ ಬಾಳೊಂದು ಭಾವಗೀತೆ ಸೇರಿದಂತೆ ಒಂದಷ್ಟು ಚಿತ್ರಗಳು ಮೂಡಿಬಂದಿದ್ದವು.

ಹಬ್ಬ ಚಿತ್ರದಲ್ಲಿ ಅಂಬರೀಷ್‌, ವಿಷ್ಣುವರ್ಧನ್‌, ದೇವರಾಜ್‌, ಶಶಿಕುಮಾರ್‌, ರಾಮ್‌ಕುಮಾರ್‌ ನಟಿಸಿದ್ದರು. ಆ ಬಳಿಕ ದಿಗ್ಗಜರು  ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್‌ ಹಾಗು ಅಂಬರೀಷ್‌ ನಟಿಸಿದ್ದರು. ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದಲ್ಲಿ ಅಂಬರೀಷ್‌, ಅನಂತ್‌ನಾಗ್‌ ಹಾಗೂ ರವಿಚಂದ್ರನ್‌ ನಟಿಸಿದ್ದರು.
&ಉದಯವಾಣಿ

Write A Comment