ನವದೆಹಲಿ, ಡಿ.13- ಕಳೆದ 2001ರಲ್ಲಿ ನಡೆದ ಸಂಸತ್ ಭವನದ ಮೇಲಿನ ದಾಳಿಯಲ್ಲಿ ವೀರಮರಣವನ್ನಪ್ಪಿದ ಹುತಾತ್ಮರಿಗೆ ಪ್ರಧಾನಿ ನರೇಂದ್ರಮೋದಿ ಮತ್ತು ಇತರ ಸಂಸದರು ಇಂದು ಸಂಸತ್ತಿನಲ್ಲಿ ಭಾವಪೂರ್ಣ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ, ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ, ರಾಜ್ಯಸಭೆ ಉಪನಾಯಕ ಪಿ.ಜೆ.ಕುರಿಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರಾದ ಗುಲಾಂನಬಿ ಅಜಾದ್, ಆನಂದ್ ಶರ್ಮಾ, ಬಿಜೆಪಿ ನಾಯಕ ಸತ್ಯನಾರಾಯಣ್ ಜತಿಯಾ ಮತ್ತಿತರ ನಾಯಕರೂ ಉಪಸ್ಥಿತರಿದ್ದರು.
2001ರ ಡಿ.13 ರಂದು ಐವರು ಸಶಸ್ತ್ರ ಉಗ್ರರು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಸಂಸತ್ ಭವನಕ್ಕೆ ನುಗ್ಗಿ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 9 ಮಂದಿ ಯೋಧರು ವೀರಮರಣವನ್ನಪ್ಪಿದ್ದರು. ಮೃತರ ಕುಟುಂಬದ ಕೆಲ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.