
ನವದೆಹಲಿ, ಡಿ.12: ಕಳೆದ ಎರಡು ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ವರ್ಷ ನವೆಂಬರ್ ತಿಂಗಳವರೆಗೆ 7.1 ದಶಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. ಅಂದರೆ ಶೇಕಡಾ 4.5ರಷ್ಟು ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸುತ್ತವೆ.
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 2014ರಲ್ಲಿ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಗೋವಾ, ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇದೆ. 2015ಯ ಜನವರಿಯಿಂದ ನವೆಂಬರ್ವರೆಗಿನ ಅವಧಿಯಲ್ಲಿ 7.1 ದಶಲಕ್ಷ ಪ್ರವಾಸಿಗರು ದೇಶಕ್ಕೆ ಭೇಟಿ ನೀಡಿದ್ದು, ಶೇ. 4.5ರಷ್ಟು ಬೆಳವಣಿಗೆ ದರ ತೋರಿಸುತ್ತಿದೆ. ಆದರೆ 2014ರ ಇದೇ ವೇಳೆಯಲ್ಲಿ ಈ ಪ್ರಮಾಣ ಶೇ.10.2ರಷ್ಟಿತ್ತು. ಅಂದರೆ 7.68 ದಶಲಕ್ಷ ಜನರು ಇಲ್ಲಿಗೆ ಭೇಟಿ ನೀಡಿದ್ದರು. 2013ರಲ್ಲಿ ಶೇ.5.9ರಷ್ಟು ಬೆಳವಣಿಗೆ ಕಂಡಿತ್ತು.
ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ವಿದೇಶಿ ವಿನಿಮಯ ಪ್ರಮಾಣದಲ್ಲೂ ಇಳಿಮುಖ ಉಂಟಾಗಿದ್ದು, 2014ರಲ್ಲಿ 2023 ದಶಲಕ್ಷ ಅಮೆರಿಕನ್ ಡಾಲರ್ನಿಂದ 1768.5 ದಶಲಕ್ಷ ಡಾಲರ್ಗೆ ವಿದೇಶಿ ವಿನಿಮಯ ಕುಸಿತ ಕಂಡಿದೆ. ಅಂದರೆ ಶೇಕಡಾ 3.8ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿದೆ.
ಪ್ರೇಮಸೌಧವಾದ ಆಗ್ರಾದ ತಾಜ್ಮಹಲ್ಗೆ ಶೇಕಡಾ 23ರಷ್ಟು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ವಿದೇಶಿ ಪ್ರವಾಸಿಗರು ಭಾರತದಲ್ಲಿ ನೆಲೆಸುವ ಪ್ರಮಾಣದಲ್ಲೂ ಕಡಿಮೆಯಾಗಿದೆ. ಈ ಹಿಂದೆ ವಿದೇಶಿ ಪ್ರವಾಸಿಗರು ಸರಾಸರಿ 20ರಿಂದ 22 ದಿನ ಭಾರತದಲ್ಲಿ ನೆಲೆಸುತ್ತಿದ್ದರು. ಆದರೆ ಈಗ ಈ ಪ್ರಮಾಣ 18ರಿಂದ 20 ದಿನಗಳಿಗೆ ಇಳಿದಿದೆ. ಭಾರತಕ್ಕೆ ವಾರ್ಷಿಕ ಶೇಕಡಾ 1ಕ್ಕಿಂತ ಕಡಿಮೆ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.