ಉಡುಪಿ: ವಿಕಲಚೇತನರಿಗೆ ಸಮಾನ ಬದುಕುವ ಅವಕಾಶಗಳನ್ನು ಕಲ್ಪಿಸಲು ಅಂಗವಿಕಲರ ಅಧಿನಿಯಮ ಮತ್ತು ರಾಷ್ಟ್ರೀಯ ದತ್ತು ನಿಧಿ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ವೈದ್ಯಕೀಯ ಪ್ರಮಾಣಪತ್ರದ ಆಧಾರದ ಮೇಲೆ ವಿಕಲಚೇತನರು ತಮ್ಮ ವಿಶೇಷ ಚೈತನ್ಯದಿಂದ ಬದುಕಲು ಪ್ರೇರಪಣೆ ನೀಡುವಂತಹ ಕಾಯಿದೆ ಶೋಷಣೆ ತಡೆಗೂ ಅಸ್ತ್ರವಾಗಿದೆ ಎಂದು ವಕೀಲ ಕೆ.ಶ್ರೀಶ ಆಚಾರ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಉಡುಪಿ, ಸರಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ, ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ’ವಿಕಲಚೇತನರ ದಿನಾಚರಣೆ’ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ವಿಕಲಚೇತನರು ಸಮಾಜದಲ್ಲಿ ಎಲ್ಲರೊಳಗೊಂದಾಗಿ ಬಾಳಲು ಅಧಿನಿಯಮಗಳು ಸಹಕರಿಸುತ್ತಿದ್ದು, ಸೌಲಭ್ಯಗಳನ್ನು ಪಡೆದು ಸ್ವಾವಲಂಬಿಗಳಾಗಿ ಬಾಳಿ ಎಂದು ಕರೆ ನೀಡಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಾಗಜ್ಯೋತಿ ಕೆ ಎ ಅವರು, ವಿಕಲಚೇತನರು ಆತ್ಮವಿಶ್ವಾಶ ಬೆಳೆಸಿಕೊಂಡು ಬದುಕುಕಟ್ಟಿಕೊಳ್ಳಿ ಎಂದು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಎಲ್ ಗೊನ್ಸಾಲಿಸ್ ಮಾತನಾಡಿದರು. ಅಧ್ಯಕ್ಷ ವಕೀಲರ ಸಂಘ ದಯಾನಂದ ಕೆ, ಉಪಸ್ಥಿತರಿದ್ದರು. ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಕು. ದೀಪಿಕಾ ನಾಯಕ್ ಅವರು ಚೇತನಾ ವಿಶೇಷ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಬೋಚಿ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಕುಮಾರ ಉತ್ತಮ ವಿಶೇಷ ಶಾಲೆಯಲ್ಲಿ ಕಲಿತು ಸ್ವ ಉದ್ಯೋಗಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಯುವಕನನ್ನು ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ನ್ಯಾಯಲಯದ ಸಿಬ್ಬಂದಿ ಪಕೀರೇಶ ಬಸಪ್ಪ ಕಾಲಿ ಸ್ವಾಗತಿಸಿದರು. ದಿನೇಶ್ ಹೆಚ್ ಪ್ರಾರ್ಥಿಸಿದರು. ಹನುಮಂತೇಗೌಡ ವಂದಿಸಿದರು. ವಿಕಲಚೇತನ ಇಲಾಖಾ ಅಧಿಕಾರಿ ನಿರಂಜನ್ ಭಟ್ ನಿರೂಪಿಸಿದರು.