ಉಡುಪಿ: ಇಂತಹಾ ಕ್ರೂರ ಸಮಾಜವಿದೆಯೇ ಇಂತಹಾ ಸಂಬಂಧಿಕರು ಇರುತ್ತಾರೆಯೇ ಎಂಬ ಪ್ರಶ್ನೆ ಈ ವರದಿ ನೋಡಿದ್ರೇ ನಿಮಗೆ ಗೊಂದಲ ಮೂಡುತ್ತೆ. ಇದು ಉಡುಪಿ ಜಿಲ್ಲೆಯ ಬ್ರಹ್ಮಾವರ ಬೈಕಾಡಿ ಸಾಲಿಕೇರಿಯ ಗಾಂಧಿನಗರದಲ್ಲಿ ನಡೆದ ಅಮಾನವೀಯ ಘಟನೆ. ಆದರೇ ಅಂತಹ ಕಷ್ಟಕ್ಕೂ ಬ್ರೇಕ್ ಹಾಕುವ ಉತ್ತಮ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ತನ್ನ ಸಾಕು ಮಗಳನ್ನು ಹಿಂಸಿಸುತ್ತಾ ಮನೆಗೆಲಸ ಮಾಡಿಕೊಂಡು ಅತ್ಯಂತ ಕ್ರೂರವಾಗಿ ವರ್ತಿಸುತ್ತಿದ್ದ ಮನೆಗೆ ಮಂಗಳವಾರ ಮಧ್ಯಾಹ್ನ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಬ್ರಹ್ಮಾವರ ಪೊಲೀಸ್ ಸಹಕಾರದಲ್ಲಿ ಧಿಢೀರ್ ಧಾಳಿ ನಡೆಸಿ, ಹಿಂಸೆಗೆ ಒಳಗಾಗಿದ್ದ ಹುಡುಗಿಯನ್ನ ರಕ್ಷಿಸಿದ ಪ್ರಕರಣ ನಡೆದಿದೆ. ಊರಿನ ಪ್ರಜ್ನಾವಂತರು ನೀಡಿದ ಸಹಕಾರದಿಂದ ಹುಡುಗಿ ಸದ್ಯ ನರಕದಿಂದ ಮುಕ್ತಿ ಪಡೆದು ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾಳೆ.

ನರಕದ ಬದುಕು ಬದುಕಿದ ಬಾಲೆ: ಬ್ರಹ್ಮಾವರದ ಹಾರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೈಕಾಡಿ ಗಾಂಧಿನಗರ ಕಾಲೋನಿಯ ಗಿರಿಜಾ(50) ಸದ್ಯ ಹುಡುಗಿಯೊಂದಿಗೆ ಅಮಾನವೀಯವಾಗಿ ವರ್ತಿಸಿ ಸಾರ್ವಜನಿಕರಿಂದ ಛೀಮಾರಿಗೆ ಒಳಗಾದವರು. ೫ ವರ್ಷ ಹಿಂದೆ ೭ನೇ ತರಗತಿ ಕಲಿಯುತ್ತಿದ್ದ 17 ವರ್ಷ ಪ್ರಾಯದ ಸುಗುಣಾ (ಹೆಸರು ಬದಲಿಸಲಾಗಿದೆ) ಅವಳು ತಂದೆ ತಾಯಿಯ ಮರಣಾನಂತರ ನೋಡುವವರು ದಿಕ್ಕಿಲ್ಲದ ಕಾರಣ ಆಶ್ರಯವನ್ನರಸಿ ತನ್ನ ಅತ್ತೆ ಗಿರಿಜಾ ಅವರ ಮನೆಗೆ ಬಂದು ನೆಲೆಸಿದ್ದಳು. ಮೊದಲು ಅಕ್ಕರೆಯಿಂದಲೇ ನೋಡಿಕೊಳ್ಳುತ್ತಿದ್ದ ಗಿರಿಜಾ ಅವರು ಸುಗುಣಾಳನ್ನು ಶಾಲೆಗೆ ಸೇರಿಸಿದ್ದರು. ಆದರೆ ೯ನೇ ತರಗತಿ ಕಲಿಯುತ್ತಿರುವ ವೇಳೆ ಪದೇ ಪದೇ ಚಿಕ್ಕ ಪುಟ್ಟ ವಿಚಾರ ಹಿಡಿದು ನೇತ್ರಾವತಿಯನ್ನು ಹಿಂಸಿಸುವುದನ್ನು ಮಾಡುತ್ತಿದ್ದ ಹಿನ್ನಲೆಯಲ್ಲಿ, ಎದುರು ವಾದಿಸುದಕ್ಕೆ ಶುರು ಮಾಡಿದ್ದಾಳೆ ಎಂದು ಮತ್ತಷ್ಟು ಹಿಂಸೆ ನೀಡುತ್ತಿದ್ದರು. ನಿರಂತರ ಹಿಂಸೆ ನಡುವೆಯೇ ಜೀವನ ನಡೆಸಿದ್ದ ಸುಗುಣಾ ತನ್ನ ನೋವನ್ನು ಯಾರೊಂದಿಗೂ ಕೂಡ ಹೇಳಿಕೊಳ್ಳಲು ಕೂಡ ಬಿಡುತ್ತಿರಲಿಲ್ಲ ಮತ್ತು ಮನೆಯ ಹಿಂದೆ ನಾಯಿ ಮಲಗಲು ಇರುವಂತೆ ಇರುವ ಜಾಗದಲ್ಲಿ ಮಲಗುವ ವ್ಯವಸ್ಥೆ ನೀಡಿದ್ದರು, ಹಳೆಯ ಹರಕು ಜಾಪೆಯಲ್ಲಿ ಭಯದಿಂದಲೇ ರಾತ್ರಿ ಕಳೆಯುತ್ತಿದ್ದೆ ಎಂದು ಆಕೆ ಪತ್ರಿಕೆ ತಿಳಿಸಿದ್ದಾಳೆ.
ಈ ವರ್ಷ ಉಡುಪಿಯ ಹುಡುಗಿಯರ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸೋಮವಾರದಂದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಶುರು ಮಾಡಿದ ಗಿರಿಜ ಅವರು ಯುವತಿಯನ್ನು ಹೊಡೆದು ಕಣ್ಣಿಗೆ ಮೆಣಸಿನ ಪುಡಿ ಹಾಕಿ ಹಿಂಸಿಸಿದ್ದರು. ಈ ಬಗ್ಗೆ ದೊಡ್ಡ ಜಗಳವಾದಾಗ ಅಕ್ಕ ಪಕ್ಕದ ಮನೆಯವರು ಕೂಡ ಗಮನಿಸಿದ್ದಾರೆ. ಈ ಬಗ್ಗೆ ಸುಗುಣಾಳ ಸ್ನೇಹಿತರೋರ್ವರು ಮಾನವ ಹಕ್ಕು ಸಂಘಟನೆಗೆ ತಿಳಿಸಿ, ಕಿಟಕಿಯ ಮೂಲಕ ಮಾನವ ಹಕ್ಕು ಸಂಘಟನೆಯವರೊಂದಿಗೆ ತನಗೆ ಇಲ್ಲಿ ಆಗುತ್ತಿರುವ ಸಮಸ್ಯೆ ನೋವು ಹಿಂಸೆಯ ಬಗ್ಗೆ ತಿಳಿಸಿದ್ದಾಳೆ.
ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಪ್ರಶಾಂತ್, ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ, ಪ್ರಭಾಕರ್ ಮತ್ತು ಇತರೇ ಕಾರ್ಯಕರ್ತರು ಈ ಪ್ರಕರಣದ ಬಗ್ಗೆ ಪೊಲೀಸ್ರಿಗೆ ಮಾಹಿತಿ ನೀಡಿ ಅನುಮತಿ ಪಡೆದು, ಪೊಲೀಸ್ ಸಿಬ್ಬಂದಿಗಳೊಂದಿಗೆ ತೆರಳಿ ಗಿರಿಜಾ ಅವರ ಮನೆಗೆ ಧಾಳಿ ನಡೆಸಿ ಯುವತಿಯ ಬಳಿ ಎಲ್ಲಾ ಮಾಹಿತಿ ಪಡೆದು ಕರೆ ತಂದಿದ್ದಾರೆ. ಧಾಳಿ ನಡೆಸುವ ವೇಳೆ ಮನೆಯಲ್ಲಿ ಬೇರೆ ಊರಿನ ಇರ್ವರು ಯುವಕರು ಇರುವುದನ್ನು ಪತ್ತೆ ಹಚ್ಚಿದ ಸ್ಥಳೀಯರು ಪೊಲೀಸ್ರಿಗೆ ತಿಳಿಸಿ ಹೊರ ಬರುವಂತೆ ಕೋರಿದ್ದಾರೆ. ಇದೇ ವೇಳೆ ಯುವತಿಯ ರಕ್ಷಣೆಗೆ ನಿಂತ ಸ್ಥಳೀಯ ಯುವಕರು ಮತ್ತು ಮನೆಯಲ್ಲಿ ಅವಿತಿದ್ದ ಯುವಕರ ನಡುವೆ ಮಾತಿನ ಚಕುಮಕಿ ನಡೆಯಿತು.
ಬೈಕಾಡಿಯಿಂದ ಆಕೆಯನ್ನು ಕರೆ ತಂದು ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಡೆದ ಘಟನೆಯಿಂದ ಭಯ ಭೀತಳಾಗಿದ್ದ ಯುವತಿಗೆ ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯ ಯುವಕರು ಧೈರ್ಯ ಹೇಳುವ ಕಾರ್ಯ ಮಾಡಿದ್ದಾರೆ.
ಸ್ಥಳೀಯೋರ್ವರ ಮೂಲಕ ಮಾಹಿತಿ ಲಭಿಸಿದೆ. ಹುಡುಗಿಯನ್ನು ಕಾಲೇಜು ಬಿಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವುದರ ಬಗ್ಗೆ ಹುಡುಗಿಯೇ ತಿಳಿಸಿದ್ದಾಳೆ. ಆ ಹಿನ್ನಲೆಯಲ್ಲಿ ಹುಡುಗಿಗೆ ೧೮ ವರ್ಷ ತುಂಬುವವರೆಗಿನ ಆಕೆಯ ಶಿಕ್ಷಣ ವಸತಿ ಮತ್ತು ಇನ್ನುಳಿದ ವ್ಯವಸ್ಥೆಯನ್ನು ಬ್ರಹ್ಮಾವರದ ಓಂ ಶ್ರೀ ಸೃಷ್ಠಿಧಾಮ ನೋಡಿಕೊಳ್ಳಲಿದೆ. ಉತ್ತಮ ಭವಿಷ್ಯ ರೂಪಿಸಿಕೊಡುವ ಆಶಯ ನಮ್ಮದು ಎನ್ನುತ್ತಾರೆ ಮಾನವ ಹಕ್ಕುಗಳ ಸಂಘಟನೆಯ ಪ್ರಶಾಂತ್ ಪಿಆರ್ಎಸ್ ಮತ್ತು ಅರುಣ್ ಕುಂದರ್ ಕಲ್ಗದ್ದೆ.
ದಿನ ನಿತ್ಯವು ಹೊಡೆಯುತ್ತಿದ್ದರು. ಸ್ನೇಹಿತೆಯ ಮನೆಗೆ ಹೋಗುವಂತಿರಲಿಲ್ಲ, ಮಂಗಳೂರು ಕಡೆಯಲ್ಲಿ ಮನೆಗೆಲಸ ಮಾಡಿ ಬದುಕುತ್ತಿರುವ ನನ್ನ ಅಜ್ಜಿ ಬಂದರೆ ನನ್ನ ಜೊತೆ ಮಾತನಾಡಲು ಬಿಡುವುದಿಲ್ಲ. ಇತ್ತೀಚೆಗೆ ಜಾಸ್ತಿ ಮಾತನಾಡಿದರೆ ನಿನಗೆ ಇನ್ನು ಆರು ತಿಂಗಳಿನಲ್ಲಿ ಮದುವೆ ಮಾಡಿಸುತ್ತೇನೆ ಎನ್ನುತ್ತಾರೆ. ಮನೆ ಹಿಂದೆ ಸೌದೆ ಕೊಟ್ಟಿಗೆಯಲ್ಲಿ ಮಲಗುತ್ತೇನೆ. ನನಗೆ ಇಲ್ಲಿ ಇರಲು ಇಷ್ಟ ಇಲ್ಲ ಹಿಂಸೆ ನೀಡಿ ಕೊಲ್ಲುತ್ತಾರೆ ಎಂದು ತನ್ನ ನೋವನ್ನು ತೋಡಿಕೊಳ್ಳುತ್ತಾಳೆ ನೊಂದ ಹುಡುಗಿ.