
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಪ್ರಧಾನಿ ಕಚೇರಿಯಿಂದ ನಡೆಯುತ್ತಿರುವ ರಾಜಕೀಯ ಪಿತೂರಿ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪವನ್ನು ತಳ್ಳಿಹಾಕಿರುವ ದೂರುದಾರ, ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ, ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೈಲಿಗೆ ಹೋಗುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನ್ಯಾಷನಲ್ ಹೆರಾಲ್ಡ್ ಪ್ರಕರಣ ಒಂದು ರಾಜಕೀಯ ಪಿತೂರಿ ಎಂಬ ಕಾಂಗ್ರೆಸ್ ಆರೋಪವನ್ನು ಸ್ವಾಮಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
‘ಪ್ರಕರಣದ ಬಗ್ಗೆ ನಾನು ಯಾವತ್ತೂ ಪ್ರಧಾನಿ ಕಚೇರಿ, ಸರ್ಕಾರ ಅಥವಾ ಬಿಜೆಪಿಗೆ ಮಾಹಿತಿ ನೀಡಿಲ್ಲ’ ಎಂದಿದ್ದಾರೆ. ಅಲ್ಲದೆ ಗಾಂಧಿ ಕುಟುಂಬದ ವಿರುದ್ಧದ ಹೋರಾಟಕ್ಕೆ ನನಗೆ ಯಾರ ಬೆಂಬಲವೂ ಬೇಡ ಎಂದು ಸ್ವಾಮಿ ಹೇಳಿದ್ದಾರೆ.
ಯಂಗ್ ಇಂಡಿಯಾ ಟ್ರಸ್ಟ್ ಮೂಲಕ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯನ್ನು ವಶಕ್ಕೆ ತೆಗೆದುಕೊಂಡ ಸೋನಿಯಾ, ರಾಹುಲ್ ಹಾಗೂ ಮತ್ತಿತರರು ವಂಚನೆ ಮತ್ತು ಭೂಮಿ ಅತಿಕ್ರಮಣ ಎಸಗಿದ್ದಾರೆಂದು ಸುಬ್ರಮಣ್ಯನ್ ಸ್ವಾಮಿ ಕೋರ್ಟ್ಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.