
ದಮಾಮ್, ಡಿ. 5: ”ಬಾಬರಿ ಮಸ್ಜಿದ್ ನೆನೆಯುತ್ತಿರೋಣ ಕಟ್ಟುವವರೆಗೂ…’’ ಅಭಿಯಾನದ ಅಂಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಚಾಪ್ಟರ್ ವತಿಯಿಂದ ಇತ್ತೀಚಿಗೆ ಖೋಬರ್ ಅಫ್ಸರಾ ರೆಸ್ಟೋರೇಂಟ್ ಸಭಾಂಗಣದಲ್ಲಿ ‘‘ಬಾಬ್ರಿಯಿಂದ ದಾದ್ರಿವರೆಗೆ ಪ್ರಜಾತಂತ್ರದ ತಲ್ಲಣಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಯಿತು.















ಮುಖ್ಯ ವಿಷಯ ಮಂಡಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮಾಮ್ ಜಿಲ್ಲಾ ಸಮಿತಿ ಸದಸ್ಯ ಸಲೀಂ ಜಿ.ಕೆ., ಬಾಬ್ರಿಯಿಂದ ಆರಂಭಗೊಂಡ ಫ್ಯಾಷಿಸ್ಟ್ ಶಕ್ತಿಗಳ ಆಕ್ರಮಣಕಾರಿ ಚಟುವಟಿಕೆಗಳು ಇತ್ತೀಚೆಗಿನ ದಾದ್ರಿ ಘಟನೆವರೆಗೆ ಮುಂದುವರಿಯುತ್ತಲೇ ಇದೆ. ಫ್ಯಾಷಿಸ್ಟ್ ಶಕ್ತಿಗಳ ಆಕ್ರಮಣವು ಕೇವಲ ಈ ದೇಶದ ಒಂದು ನಿರ್ದಿಷ್ಟ ಸಮುದಾಯ, ವರ್ಗವನ್ನಷ್ಟೇ ದಾಳಿಗೊಳಪಡಿಸಿದ್ದಲ್ಲ. ಭಾರತದ ಜನಸಾಮಾನ್ಯರ ನಿತ್ಯಜೀವನದ ಮೇಲೆ ಫ್ಯಾಷಿಸ್ಟ್ ಸಿದ್ಧಾಂತವು ಆಕ್ರಮಣ ನಡೆಸುತ್ತಲೇ ಇದೆ. ಬಾಬ್ರಿ ಧ್ವಂಸದೊಂದಿಗೆ ಜಾತ್ಯತೀತ ದೇಶದಲ್ಲಿ ಫ್ಯಾಷಿಸ್ಟ್ ಶಕ್ತಿಗಳು ಬಲಗೊಳ್ಳುತ್ತಿದ್ದಂತೆಯೇ ಬಂಡವಾಳಶಾಹಿಗಳು, ಜಾಗತಿಕ ಶಕ್ತಿಗಳು ಕೂಡ ಅವುಗಳೊಂದಿಗೆ ಕೈಜೋಡಿಸಿಕೊಂಡು ದೇಶದ ಸಂಪತ್ತನ್ನು ಕೊಳ್ಳೆಹೊಡೆಯಲಾರಂಭಿಸಿವೆ. ಇದರ ಪರಿಣಾಮವಾಗಿಯೇ ಇಂದು ದೇಶಾದ್ಯಂತ ಕೋಮುಗಲಭೆ, ಹಿಂಸೆ, ಅಸಹಿಷ್ಣುತೆ ಹಾಗೂ ಬೆಲೆಯೇರಿಕೆ ಸಮಸ್ಯೆಗಳು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿವೆ ಎಂದು ವಿವರಿಸಿದರು.
ಬಾಬ್ರಿ ಮಸ್ಜಿದ್ ಧ್ವಂಸದ ಡಿಸೆಂಬರ್ 6ನ್ನು ನೆನಪಿಸುವುದು ಎಂದರೆ ಇನ್ನೂ ಇತ್ಯರ್ಥಗೊಳ್ಳಬೇಕಾಗಿರುವ ಪ್ರಕರಣವೊಂದರ ಮೇಲೆ ನಮ್ಮ ನ್ಯಾಯಾಂಗದ ಮೇಲೆ ಭರವಸೆ, ವ್ಯಕ್ತಪಡಿಸುವುದು ಎಂದರ್ಥ. ಇನ್ನಷ್ಟು ಫ್ಯಾಷಿಸ್ಟ್ ದಾಳಿಗಳಿಂದ ದೇಶವನ್ನು ಕಾಪಾಡಬೇಕಾದರೆ ಬ್ಡಾರಿ ಮಸ್ಜಿದ್ ಧ್ವಂಸ ಮತ್ತು ಅದಕ್ಕೆ ಕಾರಣರಾದವರನ್ನು ನೆನಪಿನಲ್ಲಿಟ್ಟುಕೊಳ್ಳುವುದು ನಾಗರಿಕ ಪ್ರಜ್ಞೆಯಾಗಿದೆ ಎಂದು ಸಲೀಮ್ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಮ್ತಿಯಾಜ಼್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗುಲ್ಬರ್ಗಾ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಕೋರ್ ಕಮಿಟಿ ಸದಸ್ಯ ಮುಖ್ತದಿರ್ ಆದಿಲ್, ಇಂಡಿಯನ್ ಸೋಶಿಯಲ್ ಫೋರಂ ಆಂಧ್ರ- ತೆಲಂಗಾಣ ರಾಜ್ಯಾಧ್ಯಕ್ಷ ಅಬ್ದುಲ್ ವಾಹಿದ್ ಉಪಸ್ಥಿತರಿದ್ದರು.
ಇಂಡಿಯಾ ಫ್ರೆಟರ್ನಿಟಿ ಫೋರಮ್ ಖೋಬರ್ ಸಮಿತಿ ಸದಸ್ಯ ಮುಹಮ್ಮದ್ ಶರೀಫ್ ಕೆ. ಸ್ವಾಗತಿಸಿದರು. ಅಬ್ದುಲ್ ಸುಬ್ಹಾನ್ ಕಿರಾಅತ್ ಪಠಿಸಿದರು. ರಫೀಕ್ ಉಚ್ಚಿಲ ಧನ್ಯವಾದ ಸಲ್ಲಿಸಿದರು. ಮುಹಮ್ಮದ್ ಅಝರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.