ಲಾಹೋರ್ : ಬ್ರಿಟನ್ ರಾಣಿಯ ಕಿರೀಟದಲ್ಲಿರುವ ಭಾರತದ ಅತ್ಯಮೂಲ್ಯ, ಐತಿಹಾಸಿಕ ಮಹತ್ವದ ಕೊಹಿನೂರ್ ವಜ್ರ ತಮ್ಮದಾಗಿಸಿಕೊಳ್ಳುವಲ್ಲಿ ಈ ಪಾಕಿಸ್ಥಾನಿ ಪ್ರಜೆ ಯಶಸ್ವಿಯಾಗುತ್ತಾರೆಯೇ ? ಈ ಪ್ರಶ್ನೆ ಈಗ ಕೊಹಿನೂರ್ ಪ್ರಿಯರನ್ನು ತೀವ್ರವಾಗಿ ಕಾಡುತ್ತಿದೆ !
ವಿಶ್ವ ವಿಖ್ಯಾತ ಕೊಹಿನೂರ್ ವಜ್ರವನ್ನು ಬ್ರಿಟನ್ನಿಂದ ದೇಶಕ್ಕೆ ಮರಳಿ ತರಲು ಭಾರತ ಶತಾಯಗತಾಯ ಪ್ರಯತ್ನ ನಡೆಸುತ್ತಿರುವಂತೆಯೇ ಅತ್ತ ಪಾಕಿಸ್ಥಾನದ ಕೋರ್ಟಿನಲ್ಲಿ ಬ್ಯಾರಿಸ್ಟರ್ ಜಾವೇದ್ ಇಕ್ಬಾಲ್ ಜಾಫ್ರಿ ಎಂಬವರು ಅರ್ಜಿಯೊಂದನ್ನು ಸಲ್ಲಿಸಿದ್ದು ಆ ಪ್ರಕಾರ ಅವರು ಕೊಹಿನೂರ್ ವಜ್ರವನ್ನು ದೇಶಕ್ಕೆ ಮರಳಿ ತರುವಂತೆ ಪಾಕ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಹಾರಾಜಾ ರಣಜೀತ್ ಸಿಂಗ್ ಅವರ ಮೊಮ್ಮಗ ದಲೀಪ್ ಸಿಂಗ್ ಅವರಿಂದ ಕಿತ್ತುಕೊಂಡ ವಿಶ್ವಪ್ರಸಿದ್ಧ ಕೊಹಿನೂರ್ ವಜ್ರವನ್ನು ಬ್ರಿಟನ್ ತನ್ನ ದೇಶಕ್ಕೆ ಒಯ್ದಿದೆ. ಅದನ್ನು ಪಾಕ್ ಸರಕಾರ ಮರಳಿ ತರಬೇಕು ಎಂದು ಒತ್ತಾಯಿಸುವ ಮನವಿಯನ್ನು ಜಾಫ್ರಿ ಅವರು ಲಾಹೋರ್ ಹೈಕೋರ್ಟಿಗೆ ಸಲ್ಲಿಸಿದ್ದಾರೆ.
1953ರಲ್ಲಿ ನಡೆದಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಆಕೆಯ ಅತ್ಯಾಕರ್ಷಕ ಕಿರೀಟವನ್ನು ಕೊಹಿನೂರ್ ವಜ್ರ ಅಲಂಕರಿಸಿತ್ತು. 105 ಕ್ಯಾರೆಟ್ ತೂಕದ ಮತ್ತು ಕೋಟಿಗಟ್ಟಲೆ ಬೆಲೆಬಾಳುವ ಕೊಹಿನೂರ್ ವಜ್ರದ ಮೇಲೆ ಬ್ರಿಟನ್ ರಾಣಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಜಾಫ್ರಿ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಕೊಹಿನೂರ್ ವಜ್ರವು ಪಂಜಾಬ್ ಪ್ರಾಂತ್ಯದ ಭವ್ಯ ಸಾಂಸ್ಕೃತಿಯ ಪರಂಪರೆಯ ಸಂಕೇತವಾಗಿದೆ. ಇದರ ನಿಜವಾದ ಹಕ್ಕುದಾರರು ಈ ಪ್ರಾಂತ್ಯದ ಪ್ರಜೆಗಳು. ಪಾಕ್ ಸರಕಾರ ಇದನ್ನು ಮರಳಿ ದೇಶಕ್ಕೆ ತರುವ ಎಲ್ಲ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಬೇಕು ಎಂದು ಜಾಫ್ರಿ ವಾದಿಸಿದ್ದಾರೆ.
ಕೊಹಿನೂರ್ ವಜ್ರವನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಲ್ಲಿ ಮಧ್ಯಕಾಲೀನ ಅವಧಿಯಲ್ಲಿ ಅಗೆದು ತೆಗೆಯಲಾಗಿತ್ತು. ಆ ಸಂದರ್ಭದಲ್ಲಿ ಅದು ವಿಶ್ವದ ಅತೀ ದೊಡ್ಡ ಗಾತ್ರದ ವಜ್ರವೆಂದು ಪ್ರಖ್ಯಾತವಾಗಿತ್ತು. ಈ ವಜ್ರದ ಮೂಲ ಒಡೆಯರು ಕಾಕತೀಯ ವಂಶದ ಅರಸರು.
ಇದನ್ನು ಕಾಕತೀಯ ಅರಸರು ದೇವಸ್ಥಾನವೊಂದರಲ್ಲಿ ಹಿಂದೂ ದೇವತೆಯ ಕಣ್ಣಾಗಿ ಉಪಯೋಗಿಸಿದ್ದರು. 1849ರಲ್ಲಿ ಬ್ರಿಟಿಷ್ ಪಡೆಗಳು ಪಂಜಾಬ್ ಪ್ರಾಂತ್ಯದ ಮೇಲೆ ಆಧಿಪತ್ಯ ಸ್ಥಾಪಿಸಿದಾಗ ಸಿಕ್ಖ ಸಾಮ್ರಾಜ್ಯದ ಆಸ್ತಿಪಾಸ್ತಿಯನ್ನು ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದರು. ಆ ಸಂದರ್ಭದಲ್ಲಿ ವಿಶ್ವ ಪ್ರಸಿದ್ಧ ಐತಿಹಾಸಿಕ ಕೊಹಿನೂರ್ ವಜ್ರವು ಬ್ರಿಟಿಷರ ಪಾಲಾಗಿತ್ತು.
-ಉದಯವಾಣಿ