ಕನ್ನಡ ವಾರ್ತೆಗಳು

ಬೈಕ್ ಗೆ ಲಾರಿ ಡಿಕ್ಕಿ: ಸೋದರರಿಬ್ಬರ ದಾರುಣ ಸಾವು

Pinterest LinkedIn Tumblr

bntwl_acdent_pic

ಬಂಟ್ವಾಳ, ಡಿ.2: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗಡಿಯಾರ ಸಮೀಪ ಇಂದು ಬೆಳಗ್ಗೆ ಮರಳು ತುಂಬಿದ್ದ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸೋದರರಿಬ್ಬರೂ ದಾರುಣ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಈ ದುರಂತದಿಂದ ಆಕ್ರೋಶಿತ ಸ್ಥಳೀಯರು ದಿಢೀರ್ ಪ್ರತಿಭಟನೆಗಿಳಿದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎಲ್ಲಾ ಮರಳು ಸಾಗಾಟ ಲಾರಿಗಳನ್ನು ತಡೆ ಹಿಡಿದಿದ್ದು, ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.

ಕಲ್ಲಡ್ಕದ ನಿವಾಸಿ ವೃತ್ತಿಯಲ್ಲಿ ಮೀನುಗಾರರಾಗಿದ್ದ ಪುತ್ತಕ್ಕ ಎನ್ನುವವರ ಪುತ್ರರಾದ ಆಶಿಕ್ (26) ಮತ್ತು ಶಫೀಕ್ (23) ಮೃತ ದುರ್ದೈವಿಗಳು. ಈ ಸಹೋದರರಿಬ್ಬರೂ ಇಂದು ಬೆಳಗ್ಗೆ ಬೈಕಿನಲ್ಲಿ ಉಪ್ಪಿನಂಗಡಿಯಿಂದ ಮಂಗಳೂರಿನತ್ತ ಬರುತ್ತಿದ್ದು, ಗಡಿಯಾರ ಸಮೀಪದ ಸತ್ತಿಕಲ್ಲು ಎಂಬಲ್ಲಿ ತಲುಪಿದಾಗ ಮಂಗಳೂರಿನಿಂದ ಬೆಂಗಳೂರಿನತ್ತ ಚಲಿಸುತ್ತಿದ್ದ ಮರಳು ತುಂಬಿದ್ದ ಲಾರಿ ತನ್ನೆದುರಿನಿಂದ ಹೋಗುತ್ತಿದ್ದ ಬೇರೊಂದು ವಾಹನವನ್ನು ಓವರ್‍ಟೇಕ್ ಮಾಡುವ ಭರಾಟೆಯಲ್ಲಿ ರಸ್ತೆಯ ತೀರ ಬಲಬದಿಯಿಂದ ಚಲಿಸಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಲಾರಿಯಡಿಗೆ ತೂರಿದ್ದ ಸೋದರರಿಬ್ಬರೂ ದಾರುಣ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

bntwl_acdent_pic_2 bntwl_acdent_pic_1

ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಆಶಿಕ್‍ನ ವಿವಾಹ ನಿಶ್ಚಿತಾರ್ಥವಾಗಿದ್ದು, ಶೀಘ್ರವೇ ಮದುವೆ ನಡೆಯಲಿತ್ತೆನ್ನಲಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Write A Comment