ಕುರುಕ್ಷೇತ್ರ,ನ.29: ಜಿಲ್ಲೆಯ ಥಾನೇಸರ ಪಟ್ಟಣದಲ್ಲಿ ರವಿವಾರ ಬೆಳಗಿನ ಜಾವ ಅಕ್ರಮ ಗೋಸಾಗಣೆಯ ಆರೋಪದಲ್ಲಿ ಓರ್ವನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಆತನ ಸಹಚರ ಗಾಯಗೊಂಡಿದ್ದಾನೆ.
ಆಬಿದ್(27) ಮೃತ ವ್ಯಕ್ತಿಯಾಗಿದ್ದು,ಅಶ್ರಫ್(28) ಎಂಬಾತ ಗಾಯಗೊಂಡಿದ್ದಾನೆ. ಇವರಿಬ್ಬರೂ ಯಮುನಾ ನಗರ ನಿವಾಸಿಗಳಾಗಿದ್ದಾರೆ ಎಂದು ಎಸ್ಪಿ ಸಿಮರದೀಪ್ ಸಿಂಗ್ ತಿಳಿಸಿದರು. ಲಭ್ಯ ಮಾಹಿತಿಯ ಮೇರೆಗೆ ಪಟ್ಟಣದ ಅನಾಜ್ ಮಂಡಿ ಬಳಿ ಅಕ್ರಮ ಸಾಗಾಟಗಾರರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆಬಿದ್ ಮೃತಪಟ್ಟು, ಅಶ್ರಫ್ ಗಾಯಗೊಂಡಿದ್ದಾನೆ. ಇವರಿಬ್ಬರ ವಿರುದ್ಧ ಈ ಹಿಂದೆ ಅಕ್ರಮ ಗೋ ಸಾಗಾಟದ ಎಂಟು ಪ್ರಕರಣ ದಾಖಲಾ ಗಿದ್ದವು ಎಂದು ಅವರು ಹೇಳಿದರು.
ಕಳ್ಳ ಸಾಗಣೆದಾರರ ಗುಂಡಿನ ದಾಳಿಯಿಂದ ಪೊಲೀಸ್ ವಾಹನವೊಂದು ತೀವ್ರ ಜಖಂಗೊಂಡಿದೆ. ಈ ಘಟನೆಯಲ್ಲಿ ಪೊಲಿಸರು ಗಾಯಗೊಂಡಿಲ್ಲ ಎಂದರು.
ಗುಂಡಿನ ಚಕಮಕಿಯ ಸಂದರ್ಭ ಇತರ ಮೂವರು ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರ್ಯಾಣ ಸರಕಾರವು ಇತ್ತೀಚಿಗೆ ಗೋವಂಶ ಸಂರಕ್ಷಣೆ ಮತ್ತು ಗೋಸಂವರ್ಧನೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಗೋಹತ್ಯೆ ಮತ್ತು ಇತರ ರಾಜ್ಯಗಳಿಗೆ ಮಾರಾಟಕ್ಕಾಗಿ ಗೋಸಾಗಾಟವನ್ನು ನಿಷೇಧಿಸಿದೆ.