ಪುತ್ತೂರು, ನ.27: ಮಾಜಿ ಕೆಲಸಗಾರನ ಕೊಲೆ ಯತ್ನ ಸಂಚು ನಡೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಚಿತ್ರ ನಟ ವಿನೋದ್ ಆಳ್ವ ಅವರ ಜಾಮೀನು ಅರ್ಜಿ ಮತ್ತು ಪೊಲೀಸ್ ಕಸ್ಟಡಿ ತೀರ್ಪನ್ನು ನ.30ಕ್ಕೆ ಮುಂದೂಡಿ ಗುರುವಾರ ಪುತ್ತೂರು ಜಿಲ್ಲಾ ಐದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಈಶ್ವರಮಂಗಲದಲ್ಲಿ ಮಾಜಿ ಕೆಲಸಗಾರ ಸಚ್ಚಿದಾನಂದರ ಬೈಕ್ಗೆ ಜೀಪ್ ಢಿಕ್ಕಿ ಹೊಡೆಸಿ ಕೊಲೆ ನಡೆಸುವ ಸಂಚು ರೂಪಿಸಿದ ಆರೋಪದಲ್ಲಿ ಬಂಸಲ್ಪಟ್ಟಿರುವ ಚಿತ್ರ ನಟ ವಿನೋದ್ ಆಳ್ವ ಅವರ ಜಾಮೀನು ಅರ್ಜಿ ಮತ್ತು ಅವರನ್ನು ಪೋಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಪ್ರಾಸಿಕ್ಯೂಶನ್ ಸಲ್ಲಿಸಿದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಾಲಯವು ನ.30ಕ್ಕೆ ಮುಂದೂಡಿದೆ.
ಈ ಎರಡೂ ಅರ್ಜಿಗಳ ಕುರಿತು ಗುರುವಾರ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ಮತ್ತು ಆರೋಪಿ ಪರ ವಾದ ಮಂಡನೆಯಾಗಿತ್ತು. ಬಳಿಕ ಪ್ರಕರಣದ ತೀರ್ಪನ್ನು ಮುಂದೂಡಲಾಯಿತು.
