ಬೆಂಗಳೂರು, ನ. 24: ಪ್ರವಾಸೋದ್ಯಮ ಅಭಿವೃದ್ಧಿಯಿಂದ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಂಗಳವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಪ್ರವಾಸೋದ್ಯಮ ಮತ್ತು ಗೃಹ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ಪ್ರವಾಸಿ ಮಿತ್ರ’ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ 13ನೆ ಸ್ಥಾನದಲ್ಲಿದ್ದ ಕರ್ನಾಟಕ ಪ್ರಸಕ್ತ ವರ್ಷ ಮೂರನೆ ಸ್ಥಾನಕ್ಕೆ ಬಂದಿದ್ದು, ರಾಜ್ಯ ಸರಕಾರ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವನ್ನು ನಂಬರ್ 1 ಸ್ಥಾನಕ್ಕೆ ತರಲು ಎಲ್ಲರೂ ಸಹಕರಿಸಬೇಕು ಎಂದ ಅವರು, ದೇಶದ ಆರ್ಥಿಕ ಅವೃದ್ಧಿಗೆ ಪ್ರವಾಸೋದ್ಯಮ ದಪಾಲು ಶೇ.6.5ರಷ್ಟಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದರೆ ಕೈಗಾರಿಕೆಗಳಿಗಿಂತಲೂ ಹೆಚ್ಚಿನ ಉದ್ಯೋಗಾ ವಕಾಶ ಕಲ್ಪಿಸಲು ಸಾಧ್ಯ ಎಂದು ಹೇಳಿದರು.
ಸುರಕ್ಷತೆಗೆ ಆದ್ಯತೆ: ಪ್ರವಾಸಿ ತಾಣಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆ ವಹಿಸುವುದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸುವುದು, ಅಹಿತಕರ ಘಟನೆ ನಡೆದಾಗ ತಕ್ಷಣ ಪೊಲೀಸ್ ಠಾಣೆಗೆ ವರದಿ ನೀಡಿ, ದೂರು ನೀಡುವುದು ‘ಪ್ರವಾಸಿ ಮಿತ್ರ’ ಅಭ್ಯರ್ಥಿಗಳ ಕರ್ತವ್ಯ ಎಂದು ಅವರು ತಿಳಿಸಿದರು.
ತರಬೇತಿ: ವಿದೇಶಿ ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಎದುರಾಗುವ ಭಾಷಾ ಸಮಸ್ಯೆ ನಿವಾರಿಸಲು ಬೆಂಗಳೂರು ವಿವಿ, ವಿಶ್ವೇಶ್ವರ ತಾಂತ್ರಿಕ ವಿವಿ, ಮೈಸೂರು ವಿವಿ ಸೇರಿದಂತೆ ಐದು ವಿಶ್ವ ವಿದ್ಯಾನಿಲಯಗಳಲ್ಲಿ ಭಾಷಾ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್, ರಷ್ಯನ್, ಫ್ರೆಂಚ್, ಚೈನೀಸ್ ಮತ್ತು ಕನ್ನಡ ಭಾಷೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎ.ಹುಸೇನ್, ಅರಣ್ಯ ವಸತಿ- ವಿಹಾರ ತಾಣಗಳ ಸಂಸ್ಥೆ ಅಧ್ಯಕ್ಷ ಹಸಗೋಡು ಜಯಸಿಂಹ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಅಪರ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್, ಪ್ರವಾಸೋದ್ಯಮ ಇಲಾಖೆ ಅಪರ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಕರೋಲ, ನಗರ ಪೊಲೀಸ್ ಆಯುಕ್ತ ಮೇಘರಿಕ್, ಎಡಿಜಿಪಿ ಕಮಲ್‌ಪಂಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
