ಮಂಗಳೂರು, ನ. 14: ಯಾವುದೇ ಸಂಘಟನೆಯಲ್ಲಿ ಗುರುತಿಸಿರದ ತನ್ನ ಮೇಲೆ ಸುಮಾರು 8 ಮಂದಿಯ ತಂಡ ತಲವಾರುಗಳಿಂದ ಹಲ್ಲೆ ನಡೆಸಿದೆ ಎಂದು ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡು ನಡುಗೋಡು ಗ್ರಾಪಂ ವ್ಯಾಪ್ತಿಯ ಬಡಗುಂಡಿ ನಿವಾಸಿ ಯೂಸುಫ್‌ರ ಪುತ್ರ ಸಮೀವುಲ್ಲಾ ಆರೋಪ ಮಾಡಿದ್ದಾರೆ.
‘‘ನಾನು ಗುರುವಾರ ಸ್ನೇಹಿತರೊಂದಿಗೆ ಹಳೆಗೇಟ್ ಚರ್ಚ್ ಆವರಣದೊಳಗೆ ವಾಲ್‌ಬಾಲ್ ಆಟವಾಡಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಹಳೆಗೇಟ್ ಅಂಗಡಿಯಲ್ಲಿ ಕ್ರಿಕೆಟ್ ಆಟ ಮುಗಿಸಿ ನಿಂತಿದ್ದ ಹರೀಶ್‌ನನ್ನು ಕುಳ್ಳಿಸಿಕೊಂಡು ಸ್ವಲ್ಪ ದೂರಕ್ಕೆ ಚಲಿಸಿದಾಗ ಸುಮಾರು 8 ಮಂದಿಯ ತಂಡ ಓಮ್ನಿಯಲ್ಲಿ ಆಗಮಿಸಿ ತಲವಾರು ಬೀಸಿದ್ದಾರೆ’’ ಎಂದು ಸಮೀವುಲ್ಲಾ ಆರೋಪಿಸಿದ್ದಾರೆ.
‘‘ಹಳೆಗೇಟ್ ಅಂಗಡಿಯಿಂದ ಸುಮಾರು 10 ಅಡಿ ದೂರದಲ್ಲಿ ನಿಂತಿದ್ದ ಈ ಓಮ್ನಿ ಕಾರು ರಸ್ತೆ ಬದಿ ನಿಂತಿರುವುದನ್ನು ಬೈಕ್ ಚಾಲನೆಯ ಮುನ್ನ ಗಮನಿಸಿದ್ದು, ಆದರೆ ಅವರು ನನ್ನ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ ಎಂದು ತಿಳಿದಿರಲಿಲ್ಲ. ಬೈಕ್ ಚಲಿಸುತ್ತಿದ್ದಂತೆ ಏಕಾಏಕಿ ಬೈಕ್‌ಗೆ ಅಡ್ಡ ಬಂದ ಓಮ್ನಿ ಕಾರು ಅದರಿಂದ ಸುಮಾರು ಐದಾರು ಮಂದಿ ಇಳಿದು ತಲವಾರುಗಳನ್ನು ಬೀಸಿದ್ದಾರೆ. ಈ ಸಂದರ್ಭದಲ್ಲಿ ನಾನು ಚಾಲನೆ ಮಾಡುತ್ತಿದ್ದ ಬೈಕ್ ಅಡ್ಡ ಬಿದ್ದಿದ್ದು ತನ್ನ ಹಿಂಬದಿಯಲ್ಲಿ ಬೈಕ್‌ನಲ್ಲಿ ಕುಳಿತಿದ್ದ ಹರೀಶ್ ಕೂಡ ನೆಲಕ್ಕೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಹರೀಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಆರೋಪಿಗಳು ನನ್ನ ಮೇಲೆ ದಾಳಿ ನಡೆಸಿ ನನ್ನ ಹೊಟ್ಟೆಯ ಭಾಗಗಳಿಗೆ ಹಾಗೂ ಬೆನ್ನಿನ ಭಾಗಗಳಿಗೆ ಇರಿದಿದ್ದಾರೆ. ಆದರೆ ನಾನು ಅವರನ್ನು ದೂಡಿ ಹಾಕಿ ಸ್ಥಳದಿಂದ ಓಡಿಹೋಗಿದ್ದು, ಕತ್ತಲಿನ ಪ್ರದೇಶದಲ್ಲಿ ಅವಿತುಕೊಂಡಿದ್ದೇನೆ. ಇದೇ ಸಂದರ್ಭದಲ್ಲಿ ಆರೋಪಿಗಳು ಹರೀಶ್ ಬೆನ್ನು ಬಿದ್ದಿದ್ದು, ಅವರನ್ನು ಅಟ್ಟಾಡಿಸಿ ತಲವಾರು ಬೀಸಿ ಕೊಲೆ ಮಾಡಿದ್ದಾರೆ ಎಂದು ಸಮಿವುಲ್ಲಾ ಆರೋಪಿಸಿದ್ದಾರೆ.
‘‘ಸುಮಾರು ಎರಡೂವರೆ ವರ್ಷಗಳ ಕಾಲ ಗಲ್ಫ್‌ನಲ್ಲಿ ಕೆಲಸಕ್ಕಿದ್ದು, ಆರು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದೆ. ನಾಲ್ಕು ತಿಂಗಳ ಹಿಂದೆ ಸ್ಥಳೀಯ ಕಂಪೆನಿಯಾದವಿಜಯಲಕ್ಷ್ಮೀ ಸ್ಟೀಲ್ ಹೌಸ್‌ನಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡೆ. ಈ ಬಡಗುಂಡಿ ವ್ಯಾಪ್ತಿಯಲ್ಲಿರುವ ಸುಮಾರು 35 ಮನೆಗಳ ಪೈಕಿ ನಮ್ಮ ಒಂದೇ ಮುಸ್ಲಿಮ್ ಮನೆಯಿದ್ದು,ಎಲ್ಲರೂ ಅನ್ಯೋನ್ಯತೆಯಿಂದಿದ್ದಾರೆ. ಜಿಲ್ಲೆಯ ಯಾವ ಮೂಲೆಯಲ್ಲಿ ಎಂತಹ ಕೋಮು ಗಲಭೆ ಸಂಭವಿಸಿದ್ದರೂ ಬಡಗುಂಡಿಯಲ್ಲಿ ಯಾವುದೇ ಅಹಿತಕರ ಘಟನೆ ಈವರೆಗೆ ನಡೆದಿಲ್ಲ’’ ಎಂದುಸಮೀವುಲ್ಲಾ ತಿಳಿಸಿದ್ದಾರೆ.
‘‘ನಾನು ಮತ್ತು ಹರೀಶ್ ಒಂದೇ ಶಾಲೆಯಲ್ಲಿ ಓದಿದ್ದೇವೆ. ಹಾಗಾಗಿ ನಾವು ಹಿಂದಿನಿಂದಲೂ ಸ್ನೇಹಿತರೇ. ಹರೀಶ್ ಪೂಜಾರಿ ಕೊಲೆಗೀಡಾಗಿದ್ದಾರೆ ಎಂಬ ಸುದ್ದಿ ಕೇಳಿ ತುಂಬಾ ನೋವಾಗಿದೆ’’ ಎಂದು ಸಮೀವುಲ್ಲಾ ಹೇಳಿದ್ದಾರೆ.