ನವದೆಹಲಿ: ಕಳೆದ ಮೂರು ದಶಕಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಓಡಾಡಿಕೊಂಡಿದ್ದ ಭೂಗತ ಪಾತಕಿ ಚೋಟಾ ರಾಜನ್ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತೆ? ಸಿಬಿಐ ಅಧಿಕಾರಿಗಳ ಪ್ರಕಾರ ವಲಸೆ ಅಧಿಕಾರಿಗಳ ಬಳಿ ತನ್ನ ನಿಜವಾದ ಹೆಸರನ್ನು ಹೇಳಿದ್ದು ರಾಜನ್ ಬಂಧನಕ್ಕೆ ಕಾರಣವಾಯಿತು.
ಸಿಬಿಐ ಮೂಲಗಳ ಪ್ರಕಾರ ತನ್ನನ್ನು ತಪಾಸಣೆಗೆ ಒಳಪಡಿಸಿದ್ದ ಅಧಿಕಾರಿಗಳ ಬಳಿ ರಾಜನ್ ಪಾಸ್‌ಪೋರ್ಟ್‌ನಲ್ಲಿದ್ದ ಮೋಹನ್ ಕುಮಾರ್ ಹೆಸರಿನ ಬದಲಾಗಿ ತನ್ನ ನಿಜ ನಾಮಧೇಯವಾದ ರಾಜೇಂದ್ರ ಸದಾಶಿವ ನಿಕಾಲ್ಜೆ ಎಂದು ಹೇಳಿದ್ದಾನೆ. ಪರಿಣಾಮ ಆತನನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ರೆಡ್ ಕಾರ್ನರ್ ನೋಟಿಸ್‌ಗೆ ಒಳಪಟ್ಟ ವ್ಯಕ್ತಿ ಈತ ಎಂಬುದನ್ನು ತಿಳಿಯಲು ಇಂಡೋನೇಶಿಯಾದ ಅಧಿಕಾರಿಗಳಿಗೆ ಬಹಳ ಹೊತ್ತು ಬೇಕಾಗಲಿಲ್ಲ.
ರೆಡ್ ಕಾರ್ನರ್ ನೋಟಿಸ್‌ನಲ್ಲಿ ಒದಗಿಸಲಾಗಿದ್ದ 18 ಬೆರಳು ಗುರುತು ಮಾದರಿಗಳಲ್ಲಿ 11 ಆತನಿಗೆ ಹೋಲಿಕೆಯಾಗಿದ್ದು ಆತ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ಎಂಬುದನ್ನು ಸ್ಪಷ್ಟ ಪಡಿಸಿತು ಎಂದು ಬಾಲಿಯ ಅಧಿಕಾರಿಗಳು ತಿಳಿಸಿದ್ದಾರೆ.