
ಬೆಂಗಳೂರು, ನ. 3: ಭಾರತಿಯ ಜನತಾ ಪಕ್ಷಕ್ಕೆ ಹಿಂದೂಯೇತರ ಧರ್ಮಗಳನ್ನು ಗೌರವಿಸುವಂತಹ ಸಹಿಷ್ಣುತೆಯ ಗುಣ ವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ನಗರದ ಮುಖ್ಯ ಮಂತ್ರಿಗಳ ಗೃಹ ಕಚೇರಿಯಲ್ಲಿ ಆಯೋ ಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವಂತಹ ಕೆಲಸದಲ್ಲಿ ನಿರತವಾಗಿದ್ದು, ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ನಾನು ದನದ ಮಾಂಸ ತಿಂದರೆ ಬಹು ಸಂಖ್ಯಾತರಿಗೆ ಸಮಸ್ಯೆ ಹೇಗಾಗುತ್ತದೆ. ಗಲಭೆ ಗಳನ್ನು ಸೃಷ್ಟಿಸುವುದಕ್ಕಾಗಿ ನನ್ನ ಹೇಳಿಕೆಯನ್ನು ಬಳಸಿಕೊಳ್ಳಲಾಗುತ್ತದೆ. ಯಾವುದೇ ಸಮು ದಾಯದ ಆಹಾರದ ಸಂಸ್ಕೃತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಬಿಜೆಪಿ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಜನರು ತಿನ್ನುವ ಆಹಾರಕ್ಕೆ ಕೈ ಹಾಕುತ್ತಿದೆ ಎಂದು ಅವರು ಕಿಡಿಕಾರಿದರು.
ಕಳಸಾ ಬಂಡೂರಿ ಯೋಜನೆಯ ವಿಷಯದಲ್ಲಿ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಒಟ್ಟಾಗಿದ್ದೇವೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಹಾರಾಷ್ಟ್ರ ಹಾಗೂ ಗೋವಾ ಸರಕಾರಗಳನ್ನು ಮನವೊಲಿಸುವಂತೆ ಮನವಿ ಮಾಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ನೆಲ, ಜಲ ವಿಷಯದಲ್ಲಿ ರಾಜ್ಯ ಸರಕಾರ ಹಿಂದೇಟು ಹಾಕುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಸಂಸ್ಕೃತಿ ಸಾಬೀತು
ಗೋ ಮಾಂಸ ತಿಂದರೆ ನನ್ನ ರುಂಡ ಚೆಂಡಾಡುತ್ತೇನೆಂದು ಶಿವಮೊಗ್ಗ ನಗರ ಸಭೆಯ ಮಾಜಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಹೇಳಿಕೆ ನೀಡಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಈ ಹೇಳಿಕೆಯು ಪದೇ ಪದೇ ಬಿಜೆಪಿಯ ಸಂಸ್ಕೃತಿಯನ್ನು ಸಾಬೀತು ಪಡಿಸುತ್ತಿದೆ. ಹಾಗಾಗಿ ಈ ಹೇಳಿಕೆ ಕುರಿತು ಪರಿಶೀಲನೆ ನಡೆಸಿ ಚನ್ನಬಸಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ