ಪಾಟ್ನಾ: ತಾನೊಬ್ಬ ಪ್ರಧಾನಿ ಎನ್ನುವುದನ್ನು ಮರೆತು ಕೀಳು ಮಟ್ಟದ ಭಾಷಣ ಮಾಡುವ ಪ್ರಧಾನಿ ಮೋದಿ ಕೈಯಲ್ಲಿ, ದೇಶದ ಸಂವಿಧಾನ ಸುರಕ್ಷಿತವಾಗಿಲ್ಲವೆಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಧರ್ಭಂಗಾ, ಪೂರ್ನಿಯಾ ಮತ್ತು ಫೋರ್ಬೆಸ್ಗಂಜ್ ಚುನಾವಣೆ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಲಾಲು, ಪ್ರಧಾನಿ ಮೋದಿಯವರ ವರ್ತನೆಯಿಂದ ದೇಶದ ಸಾಹಿತಿಗಳು, ವಿಜ್ಞಾನಿಗಳು, ಚಿತ್ರನಿರ್ದೇಶಕರು, ಹೆಸರಾಂತ ವ್ಯಕ್ತಿಗಳು ತಮಗೆ ದೊರೆತಿರುವ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿದ್ದು, ಪ್ರಧಾನಿ ಹುದ್ದೆಯ ಗೌರವ ಮಣ್ಣು ಪಾಲಾದಂತಾಗಿದೆ ಎಂದು ಕಿಡಿಕಾರಿದ್ದಾರೆ.
ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅಲ್ಪಸಂಖ್ಯಾತರು, ಎಸ್ಸಿ.ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯಲ್ಲಿ ಶೇ.5 ರಷ್ಟು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ್ದರು ಎನ್ನುವ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಲಾಲು, ಇಂತಹ ಆಜ್ಞಾನಿ ಪ್ರಧಾನಿ ಮೋದಿ ಅಧಿಕಾರದಲ್ಲಿ ಯಾವ ರೀತಿ ಮುಂದುವರಿಯುತ್ತಾರೆ ಎನ್ನುವುದೇ ಆಶ್ಚರ್ಯವಾಗಿದೆ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಯಿದೆಯೇ? ಎನ್ನುವ ಬಗ್ಗೆ ಮೋದಿಗೆ ಅರಿವಿರಲಿ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಸುಳ್ಳುಗಾರರು ತುಂಬಿದ್ದಾರೆ. ನಿತೀಶ್ ಹೇಳಿಕೆಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಮತಾಂತರಗೊಂಡ ದಲಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಕೂಡಾ ಮೀಸಲಾತಿ ನೀಡಬೇಕು ಎಂದು ನಿತೀಶ್ ಬಯಸಿದ್ದರು. ಬಿಜೆಪಿ ಸಮಾಜವನ್ನು ವಿಭಜಿಸುವ ಹೇಯ ಕೃತ್ಯದಲ್ಲಿ ತೊಡಗಿದೆ ಎಂದು ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.