ಕೋಲ್ಕತಾ: ದೇಶಾದ್ಯಂತ ಗೋಮಾಂಸ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ ಆರೆಸ್ಸೆಸ್, ಅಸಹಿಷ್ಣುತೆ ವಿರುದ್ಧ ಹೋರಾಟ ನಡೆಸುತ್ತಿರುವವರು ದೇಶದ್ರೋಹಿ ವ್ಯಕ್ತಿಗಳು ಎಂದು ವಾಗ್ದಾಳಿ ನಡೆಸಿದೆ.
ರಾಂಚಿಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಪಶ್ಚಿಮ ಬಂಗಾಳದ ಜಿಷ್ಣು ಭೋಸ್, ಕಳೆದ ಕೆಲ ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ಪ್ರಬಲವಾಗಿ ಬೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಯಶಸ್ಸಿನಿಂದಾಗಿ ಹೊಟ್ಟೆಕಿಚ್ಚಿನಿಂದ ಬಳಲುತ್ತಿರುವವರು ಅಸಹಿಷ್ಣುತೆ ನೆಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಗಳಿಂದ ಇಂತಹ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಾಹಿತಿಗಳು, ವಿಜ್ಞಾನಿಗಳು, ಚಿತ್ರನಿರ್ಮಾಪಕರು ತಮಗೆ ದೊರೆತ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಕೇಂದ್ರ ಸರಕಾರಕ್ಕೆ ಹಿಂದುರಿಗಿಸಿದ್ದಾರೆ.
ಗೋಮಾಂಸ ಸೇವಿಸಿದ್ದಾನೆ ಎಂದು ಆರೋಪಿಸಿ ನಡೆದ ದಾದ್ರಿ ಹತ್ಯೆ ಘಟನೆ ದುರದೃಷ್ಕರ ಸಂಗತಿ. ಕೋಲ್ಕತಾದಲ್ಲಿ ಆಯೋಜಿಸಿದ ಗೋಮಾಂಸ ಸೇವನೆ ಪಾರ್ಟಿ ಖಂಡನೀಯ ಕೃತ್ಯ ಎಂದು ಗುಡುಗಿದ್ದಾರೆ.
ಗೋಮಾಂಸ ಸೇವನೆ ಪಾರ್ಟಿ ಆಯೋಜಿಸಿರುವುದು ಹೇಯ ಕೃತ್ಯ. ಒಂದು ವೇಳೆ, ನಾವು ಹಂದಿ ಮಾಂಸದ ಪಾರ್ಟಿ ಆಯೋಜಿದರೆ ಕೋಮುಗಲಭೆಗೆ ನಾಂದಿಯಾಗುತ್ತದೆ. ಆದ್ದರಿಂದ, ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡಬಾರದು. ದಾದ್ರಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆರೆಸ್ಸೆಸ್ ಪ್ರಾಂತ್ಯ ಕಾರ್ಯವಾಹಕ ಜಿಷ್ಣು ಭೋಸ್ ಹೇಳಿದ್ದಾರೆ.