ಮುಝಫರ್‌ನಗರ,ನ.3: 2013ರಲ್ಲಿ ನಡೆದಿದ್ದ ಮುಝಫ್ಫರ್‌ನಗರ ಗಲಭೆಯ ಸಂದರ್ಭ ನಿಷೇಧಾಜ್ಞೆಯನ್ನು ಉಲ್ಲಂಘಿ ಸಿದ ಹಾಗೂ ಕೋಮು ದ್ವೇಷವನ್ನು ಪ್ರಚೋದಿಸಿದ ಆರೋಪಗಳಿಗೆ ಸಂಬಂಧಿಸಿ ಕೇಂದ್ರ ಕೃಷಿ ಸಚಿವ ಸಂಜೀವ್ ಬಲ್ಯಾನ್, ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಶ್ ರಾಣಾ ಹಾಗೂ ಸಾಧ್ವಿ ಪ್ರಾಚಿ ವಿರುದ್ಧ ಸ್ಥಳೀಯ ನ್ಯಾಯಾಲಯ ಹೊಸತಾಗಿ ಜಾಮೀನು ಯೋಗ್ಯ ವಾರಂಟ್ ಜಾರಿಗೊಳಿಸಿದೆ.
ಮುಝಫ್ಫರ್‌ನಗರ್ ಜಿಲ್ಲಾ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೀತಾರಾಮ್, ಇವರಿಬ್ಬರ ವಿರುದ್ಧ ವಾರಂಟ್ ಜಾರಿಗೊಳಿಸಿದ್ದು, ನವೆಂಬರ್ 24ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಬಲ್ಯಾನ್ ಹಾಗೂ ಸುರೇಶ್ ರಾಣಾ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಧೀಶರು ವಾರಂಟ್ ಜಾರಿಗೊಳಿಸಿದ್ದಾರೆ. ಇದಕ್ಕೂ ಮುನ್ನ ಬಲ್ಯಾನ್, ಬಿಜೆಪಿ ಸಂಸದ ಭರತೇಂದ್ರ ಸಿಂಗ್, ಸುರೇಶ್ ರಾಣಾ ಹಾಗೂ ಸಾಧ್ವಿ ಪ್ರಾಚಿ ಸೇರಿದಂತೆ ಮುಝಫ್ಫರ್‌ನಗರ ಗಲಭೆ ಪ್ರಕರಣದ ಹಲವಾರು ಆರೋಪಿಗಳ ವಿರುದ್ಧ ನ್ಯಾಯಾಲಯವು ಅಕ್ಟೋಬರ್ 23ರಂದು ಜಾಮೀನು ಯೋಗ್ಯ ವಾರಂಟ್ ಜಾರಿಗೊಳಿಸಿತ್ತು.