ಮಂಗಳೂರು,ನ.03 ಮಂಗಳೂರು ಜೈಲಿನಲ್ಲಿ ಕೈದಿಗಳ ತಂಡದ ನಡುವೆ ನಡೆದ ಮಾರಾಮಾರಿಯಲ್ಲಿ ಕೈದಿಗಳೀಬ್ಬರು ಹತ್ಯೆಯಾದ ಹಿನ್ನೆಲೆಯಲ್ಲಿ ಕಾರಾಗೃಹ ಎಡಿಜಿಪಿ ಕಮಲ್ಪಂತ್ ಅವರು ಮಂಗಳವಾರ ಕಾರಾಗೃಹಕ್ಕೆ ಭೇಟಿ ಪರಿಶೀಲನೆ ನಡೆಸಿ, ಇಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಕಾರಾಗೃಹದಲ್ಲಿ ಇತ್ತೀಚಿಗೆ ನಡೆದ ವಿಚಾರನಾಧೀನ ಕೈದಿಗಳಿಬ್ಬರ ಹತ್ಯೆ ಪ್ರಕ್ರರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದುದು ಎಂದು ಹೇಳಿದರು.
ಜೈಲಿನೊಳಕ್ಕೆ ಮಾರಕಾಯುಧ,ಗಾಂಜಾ ಬಂದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಜೈಲಿನ ಸಿಬ್ಬಂದಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಮೈಸೂರು ಜೈಲಿನ ಮುಖ್ಯ ಅಧೀಕ್ಷಕ ಪಿ.ವಿ. ಆನಂದ ರೆಡ್ಡಿ ನೇತೃತ್ವದಲ್ಲಿ ಬಂಧೀಖಾನೆ ಇಲಾಖೆಯಿಂದ ಪ್ರತ್ಯೇಕ ತನಿಖೆ ನಡೆಯಲಿದೆ. ನಗರ ಪೊಲೀಸ್ ಕಮಿನಷರ್ ಕೂಡ ಆಂತರಿಕ ತನಿಖೆ ನಡೆಸುತ್ತಿದ್ದು, ರಾಜ್ಯದ ಎಡಿಜಿಪಿ ಅಲೋಕ್ ಮೋಹನ್ ಕೂಡ ಮಂಗಳೂರಿಗೆ ಆಗಮಿಸಿದ್ದು, ಕಮಿಷನರ್ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಲಾಗುತ್ತಿದೆ ಎಂದರು.
ಜೈಲಿನಲ್ಲಿ ನಡೆದ ಗುಂಪು ಘರ್ಷಣೆಯಿಂದ ಇಬ್ಬರು ಹತ್ಯೆಯಾಗಿದ್ದು, ಅವರಿಗೆ ಮಾರಕಾಯುಧ ಎಲ್ಲಿಂದ ಬಂತು ಎಂಬುದನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಹೊಸ ಜೈಲಿನಲ್ಲಿ ಸಿಸಿ ಟಿವಿ ಇದ್ದು, ಮುಂಭಾಗದಲ್ಲಿದೆ. ಹಳೆ ಜೈಲಿನಲ್ಲಿ ಇಲ್ಲ. ಹಾಗಾಗಿ ಅಲ್ಲಿಯೂ ಸಿಸಿ ಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಕೇಂದ್ರ ಕೈಗಾರಿಕಾ ಭದ್ರತಾಪಡೆ ಮಂಗಳೂರಿಗೆ ಆಗಮಿಸಲಿದೆ. ಕಾರಾಗೃಹದಲ್ಲಿ ಈಗ 18 ಮಂದಿ ಸಿಬ್ಬಂದಿ ಇದ್ದು, ಸಿಬ್ಬಂದಿ ಕೊರತೆ ಎದುರಿಸುತ್ತಿದೆ. 250 ಮಂದಿ ಕೈದಿಗಳಿರಬೇಕಾದಲ್ಲಿ 400ಕ್ಕೂ ಅಧಿಕ ಕೈದಿಗಳಿದ್ದಾರೆ.





