ಮಂಗಳೂರು : ಸಮಸ್ತ ಕನ್ನಡಿಗರ ಸಂಭ್ರಮಾಚಾರಣೆಯ ರಾಜ್ಯೋತ್ಸವದ ಪ್ರಯುಕ್ತ ಇಂದು (ನವಂಬರ್ 1) ಬೆಳಿಗ್ಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರರವರ ನೇತ್ರತ್ವದಲ್ಲಿ ಹಾಗೂ ಹಿರಿಯ ಸಾಹಿತಿಗಳು ಮತ್ತು ಪುರಪ್ರಮುಖರ ಉಪಸ್ಥಿತಿಯಲ್ಲಿ ತಾಯಿ ಭುವನೇಶ್ವರಿಯ ಮೆರವಣಿಗೆ ಜರಗಿತು.
ಬೆಳಿಗ್ಗೆ 7.30 ಗಂಟೆಗೆ ನಗರದ ಬಲ್ಮಠ ರಸ್ತೆಯ ಅಂಬೇಡ್ಕರ್ ವೃತ್ತ (ಜ್ಯೋತಿ ಜಂಕ್ಷನ್) ದಿಂದ ನೆಹರು ಮೈದಾನದವರೆಗೆ( ಡಾ| ಶಿವರಾಮ ಕಾರಂತ ಮಾರ್ಗವಾಗಿ) ಮೆರವಣಿಗೆ ಸಾಗಿತು.
ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಹಾಗೂ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳು, ಸಂಘಟನೆಗಳು ತಮ್ಮ ಸಂಸ್ಥೆಗಳ ನಾಮಾಂಕಿತ ಬ್ಯಾನರ್ಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ನಾಡು-ನುಡಿಯನ್ನು ಪ್ರತಿಬಿಂಬಿಸುವ ವೇಷಧಾರಿ ತಂಡಗಳು, ದಫ್, ತಾಲೀಮು, ಕೋಲಾಟ, ಗೊಂಬೆ ಕುಣಿತ ಇತ್ಯಾದಿ ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ತಂಡಗಳು ಈ ಸಂಭ್ರಮಾಚರಣೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರಗಿತು.






