ನವದೆಹಲಿ: ಗೋಮಾಂಸ ಸರಬರಾಜು ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕೇರಳ ಹೌಸ್ ಮೇಲೆ ರೈಡ್ ಮಾಡಿದ್ದ ದೆಹಲಿ ಪೊಲೀಸರ ವರ್ತನೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ಮೌನ ಮುರಿದು ಕೇರಳ ಸಿಎಂ ಒಮನ್ ಚಾಂಡಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಹಾರ್ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ನಂತರ ಕೇರಳ ಸಿಎಂ ಚಾಂಡಿಯವರನ್ನು ಭೇಟಿ ಮಾಡುವುದಾಗಿ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಹಿಂದು ಸೇನಾ ನಾಯಕ ವಿಷ್ಣು ಗುಪ್ತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿಯವರಿಗೆ ಆದೇಶ ನೀಡಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಇಂತಹ ದೂರುಗಳ ಬಗ್ಗೆ ವಿಚಾರಣೆ ನಡೆಸುವಾಗ ತುಂಬಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ದೆಹಲಿ ಪೊಲೀಸ್ ಆಯುಕ್ತ ಬಸ್ಸಿಯವರಿಗೆ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
ಕೇರಳ ಹೌಸ್ನಲ್ಲಿ ಗೋಮಾಂಸ ಸರಬರಾಜು ಮಾಡಲಾಗುತ್ತಿದೆ ಎಂದು ವಿಷ್ಣುಗುಪ್ತಾ ದೆಹಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ದೆಹಲಿಯ 20 ಪೊಲೀಸ್ ಅಧಿಕಾರಿಗಳ ತಂಡ ಕೇರಳ ಹೌಸ್ ಮೇಲೆ ರೈಡ್ ಮಾಡಿ ಪರಿಶೀಲನೆ ನಡೆಸಿತ್ತು.