ಕನ್ನಡ ವಾರ್ತೆಗಳು

ವಾಲ್ಮೀಕಿಯ ರಾಮಾಯಣ ಸಮಾಜಕ್ಕೆ ದಾರಿದೀಪ- ಸಚಿವ ಸೊರಕೆ

Pinterest LinkedIn Tumblr

ಉಡುಪಿ: ಮಹರ್ಷಿ ವಾಲ್ಮೀಕಿ ರಚಿಸಿದ ಭಾರತದ ಆದಿ ಕಾವ್ಯ ರಾಮಾಯಣವು ಎಲ್ಲಾ ಕಾಲದಲ್ಲೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಮಂಗಳವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ , ವಾಲ್ಮೀಕಿ ಭಾವಚಿತ್ರಕ್ಕೆ ಪುರ್ಷ್ಪಾರ್ಚನೆ ಮಾಡಿ ಮಾತನಾಡಿದರು.

Udp_Valmiki Jayanthi_Programme (3) Udp_Valmiki Jayanthi_Programme (2) Udp_Valmiki Jayanthi_Programme (1) Udp_Valmiki Jayanthi_Programme (4)

ವಾಲ್ಮೀಕಿ ತನ್ನ ರಾಮಾಯಣ ಗ್ರಂಥದಲ್ಲಿ ರಚಿಸಿದ ರಾಮ. ಸೀತೆ, ಲಕ್ಮಣ, ಹನುಮಂತ, ರಾವಣ ಎಲ್ಲಾ ಪಾತ್ರಗಳೂ ಎಲ್ಲಾ ಕಾಲದಲ್ಲೂ , ಎಲ್ಲಾ ಸಮಾಜದಲ್ಲೂ ಇವೆ, ಸಮಾಜವನ್ನು ಮುನ್ನಡೆಸುವ, ಮಾರ್ಗದರ್ಶನ ನೀಡುವ ಅಂಶಗಳು ಈ ಗ್ರಂಥದಲ್ಲಿವೆ. ಪರಿಶಿಷ್ಟ ಜಾತಿಯಲ್ಲಿ ಜನಿಸಿದರೂ ಕೂಡಾ ಅಗಾಧ ಪ್ರತಿಭೆಯಿಂದ ಮಹರ್ಷಿಯಾಗಿ , ಆದಿ ಗ್ರಂಥ ರಚಿಸಿದ ವಾಲ್ಮೀಕಿಯು ಯಾವುದೇ ಜನಾಂಗದಲ್ಲಿ ಜನಿಸಿದ ವ್ಯಕ್ತಿಯಲ್ಲೂ ಸಹ ಎಂತಹ ಶಕ್ತಿ ಮತ್ತು ಪ್ರತಿಭೆ ಎದೆ ಎಂದು ಎಂಬುದನ್ನು ಜಗತ್ತಿಗೆ ತೋರಿಸಿದವರು, ಇದುವರೆವಿಗೂ ರಾಮಾಯಣವನ್ನೂ ಮೀರಿಸುವ ಗ್ರಂಥ ರಚಿಸಲು ಯಾರಿಂದಲೂ ಸಾದ್ಯವಾಗಿಲ್ಲ ಎಂದ ಸಚಿವರು ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮೂಲ ನಿವಾಸಿ ಅಭಿವೃದ್ಧಿಯ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ೨೯ ಆಟೋ, ೪ ಪ್ರವಾಸಿ ಕಾರು ಮತ್ತು ೨ ಸರಕು ಸಾಗಾಣಿಕೆ ವಾಹನ ಮತ್ತು ಒಬ್ಬರು ಮಲೆಕುಡಿಯ ಫಲಾನುಭವಿಗೆ ಪ್ರವಾಸಿ ಕಾರನ್ನು ಸಚಿವರು ವಿತರಿಸಿದರು. ೨೪ ಆದಿವಾಸಿ ಕೊರಗ ಫಲಾನುಭವಿಗಳಿಗೆ ಆಟೋ ಮತ್ತು ೧೯ ಮಂದಿಗೆ ವಸತಿ ನಿವೇಶನಕ್ಕಾಗಿ ಸಂಪೂರ್ಣ ವೆಚ್ಚದ ಅನುದಾನವನ್ನು ನೀಡುವುದಾಗಿ ಸಚಿವರು ಹೇಳಿದರು.

ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಕುರಿತು ಉಪನ್ಯಾಸ ನೀಡಿದ ಪಡುಕೆರೆ ಕೋಟಾದ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್ ಮಾತನಾಡಿ, ವ್ಯಾಧ ನಾಗಿದ್ದ ವಾಲ್ಮಿಕಿ ಕ್ರೌಂಚ ಪಕ್ಷಿಯ ಸಾವನ್ನು ಕಂಡು ನುಡಿದ ಶ್ಲೋಕದ ಮೂಲಕ ತನ್ನೊಳಗಿನ ಪ್ರತಿಭೆಯನ್ನು ಕಂಡು ಆ ಮೂಲಕ ರಾಮಾಯಣ ಮಹಾಗ್ರಂಥ ರಚನೆ ಮಾಡಿದರು. ರಾಮಾಯಣವು ಪುರಾಣ ಮಾತ್ರವಲ್ಲದೇ ಅದರಲ್ಲಿ ಭಾವಗೀತೆ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇದೆ, ಅದೊಂದು ಅಪರೂಪದ ಜೀವದ್ರವ್ಯದ ಗಣಿ, ಒಂದೇ ಕೃತಿಯ ಮೂಲಕ ಆದಿ ಕವಿ ಎನಿಸಿಕೊಂಡ ಮಹರ್ಷಿ ವಾಲ್ಮೀಕಿ ಮತ್ತು ಆತನ ರಚನೆಯ ರಾಮಾಯಣ ಗ್ರಂಥ ಎಲ್ಲಾ ಕಾಲದಲ್ಲೂ ಅಜರಾಮರ. ಬದುಕನ್ನು ಸವಾಲಾಗಿ ಎದುರಿಸಲು ಪ್ರೇರಣೆಯಾಗಿರುವ, ಆಧುನಿಕ ಜಗತ್ತಿನಲ್ಲಿ ಬದುಕಿನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು , ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ರಾಮಾಯಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಉಡುಪಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಜನಾರ್ಧನ ತೋನ್ಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸವಿತ ಶಿವಾನಂದ ಕೋಟ್ಯಾನ್, ಜಿಲ್ಲಾಧಿಕಾರಿ ಡಾ. ವಿಶಾಲ್. ಆರ್ ಉಪಸ್ಥಿತರಿದ್ದರು. ಐ.ಟಿ.ಡಿ.ಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಚ್.ಎಸ್. ಪ್ರೇಮನಾಥ ಸ್ವಾಗತಿಸಿದರು.

Write A Comment